ರಾಜ್ಯ

ಸಿಎಂ ಸುತ್ತಲೂ ಇರುವ ವೀರಶೈವ ಗುಂಪು ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಬಿಡುತ್ತಿಲ್ಲ: ಗಂಗಾಮಾತೆ

Srinivas Rao BV

ಬಾಗಲಕೋಟೆ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುತ್ತಲೂ ವೀರಶೈವ ಗುಂಪು ಹೆಚ್ಚಾಗಿದ್ದು, ಆ ಗುಂಪು ಅವರನ್ನು ಲಿಂಗಾಯತ ಸ್ವತಂತ್ರ ಧರ್ಮ ಮಾಡಲು ಬಿಡುತ್ತಿಲ್ಲ ಎಂದು ಕೂಡಲ ಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು. ಕೂಡಲಸಂಗಮದಲ್ಲಿ ನಡೆಯುತ್ತಿರುವ ಶರಣ ಮೇಳ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ ಬಿಎಸ್‌ವೈ ಆಂತರ್ಯದಲ್ಲಿ ಲಿಂಗಾಯತ ಸ್ವತಂತ್ರ ಧರ್ಮ, ವೈಶಿಷ್ಟ ಧರ್ಮ ಎನ್ನುವುದು ಗೊತ್ತಿದೆ ಎಂದರು.

ಸಂಪುಟ ಪುನಾರಚನೆ, ಸುಗಮ ಆಡಳಿತ ನಡೆಸಲು ಬಿಡದೇ ಅವರನ್ನು ಕೆಲವರು ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ ಎನ್ನುವುದು ಗೊತ್ತಾಗಿದೆ. ಯಾರು ಎನ್ನುವುದನ್ನು ಬಹಿರಂಗವಾಗಿ ಹೇಳಲಾಗದು ಎಂದು ತಿಳಿಸಿದರು. ಲಿಂಗಾಯತರಲ್ಲಿ ಒಗ್ಗಟ್ಟು ಇಲ್ಲದೆ ಇರೋಕೆ ಹೀಗೆಲ್ಲ ಆಗುತ್ತಿದೆ. ಲಿಂಗಾಯತರಲ್ಲಿ ಒಗ್ಗಟ್ಟು ತರುವ ಪ್ರಯತ್ನ ನಡೆಯುತ್ತಿದೆ ಎಂದ ಅವರು  ಪ್ರಧಾನಿ ಮೋದಿಯವರಿಗೆ ಬಸವಣ್ಣನವರ ಬಗ್ಗೆ ಬಹಳ ಅಭಿಮಾನವಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಚಾರದಲ್ಲಿ ಪ್ರಧಾನಿ ಮೋದಿಯವರಿಗೆ ಯಾರೋ ತಪ್ಪು ಕಲ್ಪನೆ ಕೊಡುತ್ತಿದ್ದಾರೆ ಎಂದು ಆಪಾದಿಸಿದ ಅವರು ನೇರವಾಗಿ ಭೇಟಿ ಮಾಡಿ ಹೇಳಿದರೆ ಪ್ರಗತಿಪರ ವಿಚಾರವಾದಿ ಪ್ರಧಾನಿ ಮೋದಿ ಒಪ್ಪಿಕೊಳ್ಳಬಹದು. ಆ ಹಿನ್ನೆಲೆಯಲ್ಲಿ ಅವರ ಭೇಟಿಗೆ ಪ್ರಯತ್ನ ನಡೆದಿದೆ ಏನಾಗುತ್ತದೋ  ನೋಡೋಣ ಎಂದರು.

ಲಿಂಗಾಯತರಿಗೆ ಶೇ.ಕಡಾ 16ರಷ್ಟು ಮೀಸಲಾತಿ ಹೆಚ್ಚಿಸುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು ವೀರಶೈವ ಲಿಂಗಾಯತರಿಗೆ ಮೀಸಲಾತಿ ಕೊಡೋದನ್ನು ಒಪ್ಪುವುದಿಲ್ಲ. ಲಿಂಗಾಯತರಿಗೆ ಮೀಸಲಾತಿ, ಮಾನ್ಯತೆ ಕೊಟ್ಟರೆ ಬಹಳ ಸಂತೋಷ. ಕೇವಲ ವೀರಶೈವ ಲಿಂಗಾಯತರಿಗೆ ಮೀಸಲಾತಿ ಹೆಚ್ಚಿಸೋದಕ್ಕೆ ನಮ್ಮ ವಿರೋಧವಿದೆ. ಲಿಂಗಾಯತರಿಗೆ  ಮೀಸಲಾತಿ ಹೆಚ್ಚಿಸಿದಲ್ಲಿ ಅದರಲ್ಲಿ  ವೀರಶೈವರು ಬರುತ್ತಾರೆ. ಲಿಂಗಾಯತರು ಬರುತ್ತಾರೆ. ಬಿಎಸ್‌ವೈಗೆ ಧರ್ಮದ ಬಗ್ಗೆ ಅಭಿಮಾನ ಇದೆ. ಈಗ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತಾತ್ಕಾಲಿಕವಾಗಿ ದೂರ ಸರಿದಿರಬೇಕ ಎಂದು ಅಭಿಪ್ರಾಯ ಪಟ್ಟ ಅವರು ಮುಂದೆ ಬಂದೆ ಬರುತ್ತಾರೆ. ನಾವು ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗುವರಿಗೂ ಹೋರಾಟ ಮುಂದುವರಿಸುತ್ತೇವೆ ಎಂದರು. 

ಮುಂದಿನ ಮಾರ್ಚ್ನಲ್ಲಿ ಹೈದರಾಬಾದ್‌ನಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬೃಹತ್ ರ‍್ಯಾಲಿ ಆಯೋಜಿಸುವ ಚಿಂತನೆ ಇದೆ. ಕಾನೂನಾತ್ಮಕ ಹೋರಾಟಕ್ಕೂ ವಿಚಾರ  ನಡೆಸಿದ್ದೇವೆ. ಕಾನೂನು ಹೋರಾಟದ ಬಗ್ಗೆ ಜಾಮದಾರ್ ಚಿಂತನೆ ಮಾಡುತ್ತಿದ್ದಾರೆ. ನಾವು ಹೋರಾಟ ಮುಂದುವರೆಸಿಕೊಂಡು ಹೋಗುತ್ತೇವೆ ಎಂದರು.

SCROLL FOR NEXT