ರಾಜ್ಯ

ಎಲ್ಲಾ ಪ್ರಶ್ನೆಗೆ ಉತ್ತರಿಸಿದ್ದೇನೆ, ಅಗತ್ಯ ದಾಖಲೆ ಸಲ್ಲಿಸಿದ್ದೇನೆ: ಇಡಿ ವಿಚಾರಣೆ ಬಳಿಕ  ಕೆ.ಜೆ.ಜಾರ್ಜ್

Raghavendra Adiga

ಬೆಂಗಳೂರು: ವಿದೇಶದಲ್ಲಿ ಅಕ್ರಮ ಹಣ ಹೂಡಿಕೆ ಆರೋಪದಡಿ ಮಾಜಿ ಸಚಿವ ಕೆ.ಜೆ. ಜಾರ್ಜ್ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯ ಕಚೇರಿಗೆ ಹಾಜರಾಗಿ, ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದಿದ್ದಾರೆ.

ಜಾರ್ಜ್ ಅವರು ತಮ್ಮ ಮಕ್ಕಳ ಹೆಸರಿನಲ್ಲಿ ವಿದೇಶದಲ್ಲಿ ಹೂಡಿಕೆ ಮಾಡಿದ್ದು, ಅದನ್ನು ಚುನಾವಣೆ ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಷ್ಟ್ರ ಸೇವಾ ಸಮಿತಿ ಪಕ್ಷದ ವತಿಯಿಂದ ರವಿ ಕೃಷ್ಣಾ ರೆಡ್ಡಿ ಅವರು ಈ ಬಗ್ಗೆ ದಾಖಲೆ ಸಮೇತ ಇಡಿಗೆ ದೂರು ನೀಡಿದ್ದರು. 

ಹೀಗಾಗಿ ರವಿ ಕೃಷ್ಣಾ ರೆಡ್ಡಿ ಅವರು ನೀಡಿರುವ ದಾಖಲೆಗಳ ಆಧಾರದ ಮೇಲೆ ಕೆ.ಜೆ ಜಾರ್ಜ್, ಪತ್ನಿ ಸುಜಾ ಹಾಗೂ ಪುತ್ರಿ ರೇನಿಟಾ, ಪುತ್ರ ರಾಣಾಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು  ವಿಚಾರಣೆಗೆ ಹಾಜರಾಗಿದ್ದರು.

ಇಡಿ ವಿಚಾರಣೆ ಮುಕ್ತಾಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳಿಗೆ ಅಗತ್ಯ ದಾಖಲೆ ಸಲ್ಲಿಸಿದ್ದೇನೆ. ಇನ್ನು ಹೆಚ್ಚಿನ ದಾಖಲೆ ಕೇಳಿದ್ದು, ಮುಂದಿನ ದಿನಗಳಲ್ಲಿ ನೀಡಲಿದ್ದೇನೆ ಎಂದರು. 

ಅಧಿಕಾರಿಗಳು ಕೇಳಿದ್ದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಅವರಿಗೇನು ದಾಖಲೆಬೇಕೋ ಅವುಗಳನ್ನು ನೀಡಲು ಸಿದ್ಧ ಎಂದರು. 

ಅವಶ್ಯಕ ಸಂದರ್ಭದಲ್ಲಿ ಕೆಲವೊಂದು ಬಾರಿ ವಿಚಾರಣೆ ಕರೆಯಲಿದ್ದಾರೆ, ಅದಕ್ಕೂ ತಾವು ಹಾಜರಾಗುವುದಾಗಿ ಅವರು ತಿಳಿಸಿದರು. 

ಆರೋಪ ಕೇಳಿ ಬಂದ ತಕ್ಷಣ ತಾವು ತಪ್ಪಿತಸ್ಥರಾಗುವುದಿಲ್ಲ. ಅದಕ್ಕಾಗಿ ಮೊದಲು ತನಿಖೆ ಆಗಬೇಕಾಗುತ್ತದೆ. ದೂರು ಯಾರು ಬೇಕಾದರೂ ನೀಡಬಹುದು ಎಂದರು.

SCROLL FOR NEXT