ರಾಜ್ಯ

ಬೆಳಗಾವಿಗೆ ಮಹಾರಾಷ್ಟ್ರ ಸಚಿವ ಭೇಟಿ: ಗಡಿಯಲ್ಲಿ ಉದ್ವಿಗ್ನ ವಾತಾವರಣ ಹಿನ್ನೆಲೆಯಲ್ಲಿ ಸಚಿವರ ಬಂಧನ, ಬಿಡುಗಡೆ

Manjula VN

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿಯು ಆಚರಿಸುವ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸುವ ಸಲುವಾಗಿ ಕಳ್ಳರಂತೆ ಬೆಳಗಾವಿಗೆ ಬಂದಿದ್ದ ಮಹಾರಾಷ್ಟ್ರ ಸಚಿವ ರಾಜೇಂದ್ರ ಪಾಟೀಲ್ ಯಡ್ರಾವಕರ್ ವಿರುದ್ಧ ವಿರೋಧಗಳು ವ್ಯಕ್ತವಾಗಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸಚಿವರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು. 

ಒಂದು ರಾಜ್ಯದಸಚಿವರು ಮತ್ತೊಂದು ರಾಜ್ಯವನ್ನು ಪ್ರವೇಶಿಸುವುದಕ್ಕೂ ಮುನ್ನ ಅಲ್ಲಿಯ ಜಿಲ್ಲಾಡಳಿತಕ್ಕೆ ಅಧಿಕೃತವಾಗಿ ಮಾಹಿತಿ ನೀಡುವುದು ಕಡ್ಡಾಯವಾಗಿದ್ದು, ಮತ್ತೊಂದು ರಾಜ್ಯಗಲ್ಲಿ ತಾವು ಭಾಗವಹಿಸುವ ಕಾರ್ಯಕ್ರಮದ ಬಗ್ಗೆಯೂ ಸಂಪೂರ್ಣ ಮಾಹಿತಿ ನೀಡಿಯೇ ಬರಬೇಕಾಗುತ್ತದೆ. ಆದರೆ, ಮಹಾರಾಷ್ಟ್ರದ ಸಚಿವರು ಬೆಳಗಾವಿ ಜಿಲ್ಲಾಡಳಿತಕ್ಕೆ ಜಿಲ್ಲಾ ಪೊಲೀಸರಿಗೆ ಯಾವುದೇ ಮಾಹಿತಿ ನಡದೇ ಬಂದಿರುವುದು ವಿರೋಧಕ್ಕೆ ಕಾರಣವಾಗಿದೆ. 

ಹೀಗಾಗಿ ಕರ್ನಾಟಕ ಪೊಲೀಸರು ಸಚಿವರನ್ನು ವಶಕ್ಕೆ ತೆಗೆದುಕೊಂಡು ಮರಳಿ ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗಿ ಬಿಡುಗಡೆ ಮಾಡಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಉಭಯ ರಾಜ್ಯಗಳ ಗಡಿ ವಿವಾದ ಸಂಬಂಧ ನಡೆದ ಘರ್ಷಣೆಯಲ್ಲಿ ಎಂಇಎಸ್ ಕಾರ್ಯಕರ್ತರೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಗಡಿಯಲ್ಲಿ ಉಭಯ ರಾಜ್ಯಗಳ ನಾಯಕರ ಆಗಮನಕ್ಕೆ ಸರ್ಕಾರ ನಿಷೇಧ ಹೇರಿತ್ತು. ಗಡಿಯಲ್ಲಿ ಬಿಗಿ ಭದ್ರತೆಯನ್ನೂ ನಿಯೋಜಿಸಲಾಗಿತ್ತು. ಆದರೂ, ಮಹಾರಾಷ್ಟ್ರ ಸಚಿವರು ತಮ್ಮ ಖಾಸಗಿ ಕಾರಿನಲ್ಲಿ ಬೆಳಗಾವಿ ಪ್ರವೇಶಿಸಿದ್ದರು. 

ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಸಚಿವರನ್ನು ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ್ದಾರೆ. ಸಚಿವರನ್ನು ವಶಕ್ಕೆ ಪಡೆದುಕೊಳ್ಳುವ ವೇಳೆ ಸ್ಥಳದಲ್ಲಿ ಕೆಲ ಕಾಲ ಮಾತಿನ ಚಕಮಕಿ ಕೂಡ ನಡೆದಿವೆ. ಆದರೂ, ಪೊಲೀಸರು ಸಚಿವರನ್ನು ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿ ಮಹಾರಾಷ್ಟ್ರ ಗಡಿಯಲ್ಲಿ ಬಿಟ್ಟು ಬಿಡುಗಡೆ ಮಾಡಿದ್ದಾರೆಂದು ಮೂಲಗಳು ಮಾಹಿತಿ ನೀಡಿವೆ. 

ಇನ್ನು ಸಚಿವರ ಬಂಧನಕ್ಕೆ ಶಿವಸೇನೆ ನಾಯಕ ಸಂಜಯ್ ರಾವತ್ ಅವರು ರಾಜ್ಯದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದು, ಯಡ್ರಾವಕರ್ ಮೇಲೆ ದೌರ್ಜನ್ಯ ಎಸಗಿರುವುದಕ್ಕೆ ನಾನು ಖಂಡನೆ ವ್ಯಕ್ತಪಡಿಸುವುದಿಲ್ಲ. ಬೆಳಗಾವಿಗೆ ನಾನೇ ಸ್ವತಃ ಭೇಟಿ ನೀಡುತ್ತೇನೆ. ನೋಡೋಣ ಏನಾಗುತ್ತದೆ. ಜೈ ಮಹಾರಾಷ್ಟ್ರ ಎಂದು ಟ್ವೀಟ್ ಮಾಡಿದ್ದಾರೆ. 

SCROLL FOR NEXT