ರಾಜ್ಯ

ಕನ್ನಡ ಹಾಡು ಹಾಡಿದ ಡಿಸಿಪಿ ಇಶಾ ಪಂತ್, ವಿಡಿಯೋ ವೈರಲ್

Lingaraj Badiger

ಬೆಂಗಳೂರು: ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿ ಇಶಾ ಪಂತ್ ಅವರು ಕನ್ನಡ ಕಲಿತು, ಶಂಕರ್ ನಾಗ್ ಅಭಿನಯದ ಗೀತಾ ಚಿತ್ರದ ಹಾಡು ಹಾಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. 

2011ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿರುವ ಇಶಾ ಪಂತ್ ಅವರು ಮೂಲತಃ ಭೋಪಾಲ್ ನವರಾಗಿದ್ದು, ಉತ್ತಮ ಕೆಲಸದೊಂದಿಗೆ ಇದೀಗ ಸ್ಥಳೀಯ ಭಾಷೆ ಕಲಿತು ಹಾಡು ಹಾಡಿದ್ದಾರೆ.

ಇಶಾ ಪಂತ್ ಅವರು ‘ಜೊತೆಯಲಿ ಜೊತೆಯಲಿ ಇರುವೆನು ಹೀಗೆ ಎಂದೂ’… ಸಾಂಗ್ ಹಾಡಿದ್ದು, ಅವರು ಹಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಇನ್ನು ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಜತೆ ಮಾತನಾಡಿದ ಇಶಾ ಪಂತ್ ಅವರು, 2016ರಲ್ಲಿ ನಾನು ಕರ್ನಾಟಕಕ್ಕೆ ಬಂದೆ. ಅಲ್ಲದೆ ಕನ್ನಡಿಗನನ್ನು ಮದುವೆಯಾದೆ. ಹೀಗಾಗಿ ನಾನು ಕನ್ನಡ ಕಲಿಯಲು ಇದು ಮೊದಲ ಕಾರಣವಾಯಿತು. ಅಲ್ಲದೆ ಸ್ಥಳೀಯ ಜನರೊಂದಿಗೆ ಸಂಪರ್ಕ ಸಾಧಿಸಲು ಸ್ಥಳೀಯ ಭಾಷೆಯ ಅಗತ್ಯ ಇದೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಸ್ಥಳೀಯ ಭಾಷೆ ಕಲಿಯಬೇಕು ಎಂದಿದ್ದಾರೆ.

ಕನ್ನಡ ಸಿನಿಮಾಗಳ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿರುವ ಐಪಿಎಸ್ ಅಧಿಕಾರಿ, ಕನ್ನಡ ಸಿನಿಮಾಗಳಲ್ಲಿ ಸುಂದರವಾದ ಸಂಗೀತ ಮಾತ್ರವಲ್ಲದೆ ಭಾಷೆಯಲ್ಲಿ ಜೀವಂತತೆಯ ಪ್ರಜ್ಞೆಯೂ ಇದೆ ಎಂದಿದ್ದಾರೆ.

ಕನ್ನಡ ಹಾಡು ಹಾಡುವುದು ಮತ್ತು ಕೇಳುವುದು ನನಗೆ ತುಂಬಾ ಇಷ್ಟ. ಜೊತೆಯಲಿ ಜೊತೆಯಲಿ ಹಾಡು ನನಗೆ ಬಹಳ ಇಷ್ಟವಾಯಿತು. ಇದನ್ನು ನನ್ನ ಪತಿ ನನಗೆ ಹೇಳಿಕೊಟ್ಟರು ಎಂದು ಇಶಾ ಪಂತ್ ಹೇಳಿದ್ದಾರೆ.

SCROLL FOR NEXT