ರಾಜ್ಯ

ಭಾರತದ ಅತ್ಯಂತ ಮಾಲಿನ್ಯಭರಿತ ನಗರ ಯಾವುದು? ಕರ್ನಾಟಕದ 8 ಜಿಲ್ಲೆಗಳು ಕಲುಷಿತ!

Srinivasamurthy VN

ನವದೆಹಲಿ: ದೇಶದ ಅತ್ಯಂತ ಮಾಲಿನ್ಯಭರಿತ ನಗರ ಪಟ್ಟಿಯನ್ನುಗ್ರೀನ್ ಪೀಸ್ ಇಂಡಿಯಾ ಬಿಡುಗಡೆ ಮಾಡಿದ್ದು, ಜಾರ್ಖಂಡ್‌ನ ಝರಿಯಾ ಭಾರತದ ಅತ್ಯಂತ ಮಾಲಿನ್ಯಭರಿತ ನಗರವಾಗಿ ಮುಂದುವರಿದಿದೆ. ಅಂತೆಯೇ ಕರ್ನಾಟಕದ ಬರೊಬ್ಬರಿ 8 ಜಿಲ್ಲೆಗಳು ಕಲುಷಿತ ನಗರಗಳ ಪಟ್ಟಿಯಲ್ಲಿವೆ.

ಹೌದು.. ಕಳೆದ ಬಾರಿಯೂ ಜಾರ್ಖಂಡ್‌ನ ಝರಿಯಾ ಭಾರತದ ಅತ್ಯಂತ ಮಾಲಿನ್ಯಭರಿತ ನಗರ ಎಂಬ ಕುಖ್ಯಾತಿಗೆ ಈಡಾಗಿತ್ತು. ಈ ಸಂಬಂಧ ಜಾರ್ಖಂಡ್ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡ ಹೊರತಾಗಿಯೂ ಝರಿಯಾ ಅತ್ಯಂತ ಮಾಲಿನ್ಯ ಭರಿತ ನಗರ ಎಂಬ ಕುಖ್ಯಾತಿಗೆ ಕಳಚಿಕೊಳ್ಳುವಲ್ಲಿ ವಿಫಲವಾಗಿದೆ. ಕಲ್ಲಿದ್ದಲು ಗಣಿಗಳು ಮತ್ತು ಕೈಗಾರಿಕೆಗಳಿಗಾಗಿ ಹೆಸರಾಗಿರುವ ಜಾರ್ಖಂಡ್‌ನ ಧನಬಾದ್ ಭಾರತದಲ್ಲಿ ಎರಡನೇ ಅತ್ಯಂತ ಮಾಲಿನ್ಯಭರಿತ ನಗರವಾಗಿದೆ.

ಮಿರೆರಾಮ್‌ನ ಲುಂಗ್ಲೀ ಅತ್ಯಂತ ಕಡಿಮೆ ಮಾಲಿನ್ಯಯುಕ್ತ ನಗರವಾಗಿದ್ದು,ಮೇಘಾಲಯದ ಡೌಕಿ ನಂತರದ ಸ್ಥಾನದಲ್ಲಿದೆ. 10 ಅತ್ಯಂತ ಮಾಲಿನ್ಯಯುಕ್ತ ನಗರಗಳಲ್ಲಿ ನೊಯ್ಡಾ, ಗಾಝಿಯಾಬಾದ್, ಬರೇಲಿ, ಅಲಹಾಬಾದ್, ಮೊರಾದಾಬಾದ್ ಮತ್ತು ಫಿರೋಝಾಬಾದ್ ಉತ್ತರ ಪ್ರದೇಶಕ್ಕೆ ಸೇರಿವೆ.

ಇನ್ನು ಭಾರಿ ವಾಯು ಮಾಲಿನ್ಯದಿಂದಾಗಿ ಸುದ್ದಿಗೆ ಗ್ರಾಸವಾಗಿರುವ ರಾಜಧಾನಿ ದೆಹಲಿ ವಾಯುಮಾಲಿನ್ಯ ಕಡಿಮೆ ಮಾಡುವಲ್ಲಿ ಅಲ್ಪ ಪ್ರಮಾಣದ ಸಾಧನೆ ಮಾಡಿದ್ದು, ಅಂತೆಯೇ ಮಾಲಿನ್ಯ ಭರಿತ ನಗರಗಳ ಪಟ್ಟಿಯಲ್ಲಿ ಅಲ್ಪ ಪ್ರಮಾಣದ ಚೇತರಿಕೆ ಕಂಡಿದೆ. ಕಳೆದ ಬಾರಿ 8ನೇ ಸ್ಥಾನದಲ್ಲಿದ್ದ ದೆಹಲಿ ಈ ಬಾರಿ 10ನೇ ಸ್ಥಾನದಲ್ಲಿದೆ. 

ಕರ್ನಾಟಕದ 8 ಜಿಲ್ಲೆಗಳೂ ಇವೆ ಪಟ್ಟಿಯಲ್ಲಿ
ಇನ್ನು ಕಲುಷಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಹಲವು ಜಿಲ್ಲೆಗಳು ಕೂಡ ಇದ್ದು, ಬೆಂಗಳೂರು, ರಾಯಚೂರು, ಬೆಲಗವಿ, ತುಮಕೂರು, ಕೋಲಾರ, ವಿಜಯಪುರ, ಹುಬ್ಬಳ್ಳಿ, ಧಾರವಾಡ ಮತ್ತು ಬಾಗಲಕೋಟೆ ಹೆಚ್ಚು ಕಲುಷಿತಗೊಂಡ ನಗರಗಳಾಗಿವೆ. ಇಲ್ಲಿ ಪಿಎಂ 10 ಲೆವೆಲ್ ಮಟ್ಟ 60 ಮೈಕ್ರೋಗ್ರಾಂಗಳಿಗಿಂತ  ಹೆಚ್ಚಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ರಾಜ್ಯದ ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮತ್ತು ರಾಯಚೂರು ನಗರಗಳು ಅತ್ಯಂತ ಹೆಚ್ಚು ಕಲುಷಿತಗೊಂಡ ನಗರಗಳಾಗಿದ್ದು, ಪಿಎಂ 10 ಲೆವೆಲ್ ಮಟ್ಟ ವಾರ್ಷಿಕ 90 ಮೈಕ್ರೋಗ್ರಾಂ ಗಳಿಗಿಂತ ಹೆಚ್ಚಿದೆ ಎನ್ನಲಾಗಿದೆ. ರಾಜ್ಯದಲ್ಲೂ ಕೂಡ ವಾಹನಗಳಿಂದ ಹೊರಬರುವ ಹೊಗೆಯೇ ಮಾಲಿನ್ಯ ಪ್ರಮಾಣ ಹೆಚ್ಚಿಸುವಲ್ಲಿ ಗಣನೀಯ ಪಾತ್ರವಹಿಸುತ್ತಿದೆ ಎಂದು  ಗ್ರೀನ್‌ಪೀಸ್ ಇಂಡಿಯಾದ ಹಿರಿಯ ಪ್ರಚಾರಕರಾದ ಅವಿನಾಶ್ ಚಂಚಲ್ ಹೇಳಿದ್ದಾರೆ.

ಅಲ್ಲದೆ ದೇಶದ ಬಹುತೇಕ ಎಲ್ಲ ಪ್ರಮುಖ ನಗರಗಳ ಪೈಕಿ ಶೇ.80ರಷ್ಟು ನಗರಗಳಲ್ಲಿನ ಪಿಎಂ 10 ಲೆವೆಲ್ ಮಟ್ಟ 60 ಮೈಕ್ರೋ ಗ್ರಾಂಗಳಿಗಿಂತ ಹೆಚ್ಚಿದೆ ಎಂದು ಚಂಚಲ್ ಆತಂಕ ವ್ಯಕ್ತಪಡಿಸಿದ್ದಾರೆ.

SCROLL FOR NEXT