ರಾಜ್ಯ

ದೆಹಲಿ ಗಣರಾಜ್ಯೋತ್ಸವ ಪರೇಡ್: ಎನ್ ಸಿ ಸಿ ಮಹಿಳೆಯರ ತಂಡಕ್ಕೆ ದಾವಣಗೆರೆ ಬಾಲಕಿ ನೇತೃತ್ವ

Manjula VN

ದಾವಣಗೆರೆ: ನವದೆಹಲಿಯಲ್ಲಿ ಜನವರಿ 26 ನಡೆಯಲಿರುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಅಖಿಲ ಭಾರತ ಎನ್'ಸಿಸಿ ಮಹಿಳೆಯರ ತಂಡವನ್ನು ದಾವಣಗೆರೆ ಜಿಲ್ಲೆ ಹರಿಹರದ ವಿದ್ಯಾರ್ಥಿನಿ, ಸೀನಿಯರ್ ಅಂಡರ್ ಆಫೀಸರ್ ಶ್ರೀಷ್ಮಾ ಹೆಗಡೆ ಮುನ್ನಡೆಸಲಿದ್ದಾರೆ. 

ಇತ್ತೀಚೆಗೆ ರಾಜ್ಯದ ವಿದ್ಯಾರ್ಥಿನಿಯೊಬ್ಬರು ರಾಷ್ಟ್ರಮಟ್ಟದಲ್ಲಿ ಎನ್'ಸಿಸಿ ಟ್ಯೂಪ್ ಮುನ್ನಡೆಸುವ ಗೌರವಕ್ಕೆ ಪಾತ್ರರಾಗುತ್ತಿರುವುದು 2ನೇ ಬಾರಿ. 2017ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಕೊಡಗಿನ ಐಶ್ವರ್ಯ ಈ ಸಾಧನೆ ಮರೆದಿದ್ದು, ಇದೀಗ 3 ವರ್ಷಗಳ ಬಳಿಕ ಶ್ರೀಷ್ಮಾ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ. 

ಹರಿಹರದ ವೈದ್ಯ ಡಾ.ಪ್ರವೀಣ ಹೆಗಡೆ, ಬಿಂದು ಹೆಗಡೆ ದಂಪತಿ ಪುತ್ರಿಯಾದ ಶ್ರೀಷ್ಮಾ ಹೆಗಡೆ ಹರಿಹರಕ್ಕೆ ಸಮೀಪದ ಹಾವೇರಿ ಜಿಲ್ಲೆ ಕುಮಾರಪಟ್ಟಣದ ಆದಿತ್ಯ ಬಿರ್ಲಾ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದಾರೆ. ಓದಿನೊಂದಿಗೆ ಪಠ್ಯ, ಪಠ್ಯೇತರ ಚಟುವಟಿಕೆಯಲ್ಲೂ ಮುಂಚೂಣಿಯಲ್ಲಿರುವ ಪ್ರತಿಭಾವಂತೆಯಾಗಿರುವ ಶ್ರೀಷ್ಮಾ ಹೆಗಡೆಯ ಈ ಸಾಧನಗೆ ಆಕೆಯ ಹೆತ್ತವರು, ಕಾಲೇಜಿನ ಪ್ರಾಧ್ಯಾಪಕ ವೃಂದದವರು ಸಂತಸ ವ್ಯಕ್ತಪಡಿಸಿದೆ. ಶ್ರೀಷ್ಮಾ ಈಗಾಗಲೇ ತನ್ನ ತರಬೇತುದಾರರೊಂದಿಗೆ ನವದೆಹಲಿ ತೆರಳಿ ಪಥ ಸಂಚನದ ತಾಲೀಮು ಸಹ ನಡೆಸಿದ್ದಾರೆ. 

SCROLL FOR NEXT