ರಾಜ್ಯ

ದೇಶಕ್ಕಾಗಿ ದುಡಿಯಿರಿ, ಬದುಕಿ ಮತ್ತು ಸಮರ್ಪಿಸಿಕೊಳ್ಳಿ ರಾಜ್ಯಪಾಲ ವಜುಭಾಯಿ ವಾಲಾ

Srinivas Rao BV

ಬೆಂಗಳೂರು: ನಮ್ಮ ಪ್ರತಿ ಕೆಲಸಗಳು ಸಹ ದೇಶದ ಒಳಿತಿಗಾಗಿರಬೇಕು. ಹಾಗೆಯೇ ಪ್ರತಿಯೊಬ್ಬರು ರಾಷ್ಟ್ರ ಕಟ್ಟುವುದಕ್ಕಾಗಿ ಕೆಲಸ ಮಾಡಬೇಕು. ದೇಶಕ್ಕಾಗಿ ದುಡಿಯಿರಿ, ಬದುಕಿ ಮತ್ತು ಸಮರ್ಪಿಸಿಕೊಳ್ಳಿ ಎಂದು ರಾಜ್ಯಪಾಲ ವಜುಭಾಯಿ ವಾಲಾ ಅವರು ಕರೆ ನೀಡಿದ್ದಾರೆ.

ನಗರದ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಚುನಾವಣಾ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ/ಸಂಸ್ಥೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಪ್ರಶಸ್ತಿ ಅಥವಾ ಸನ್ಮಾನಗಳು ನಮ್ಮ ಕೆಲಸವನ್ನು ನಿರ್ಧರಿಸುವುದಿಲ್ಲ.  ಪ್ರತಿ ಕೆಲಸವೂ ಸಹ ಮುಖ್ಯವಾಗಿದ್ದು, ಪ್ರತಿಯೊಬ್ಬರು ತಮಗೆ ನೀಡಿರುವ ಕೆಲಸವನ್ನು ಅತ್ಯುತ್ತಮವಾಗಿ ನಿರ್ವಹಿಸಿ ದೇಶ ಕಟ್ಟುವ ಸಾರ್ಥಕತೆಯನ್ನು ಮೆರೆಯಬೇಕು ಎಂದು ಹೇಳಿದರು.

ಮಹಾತ್ಮ ಗಾಂಧೀಜಿ ಅವರು ವೃತ್ತಿಯಲ್ಲಿ ವಕೀಲರಾಗಿದ್ದರು. ಅಂದಿನ ಕಾಲದಲ್ಲಿ ಅವರು ತಮ್ಮ ವೃತ್ತಿಯಲ್ಲಿಯೇ ಮುಂದುವರೆಯಬಹುದಿತ್ತು. ಆದರೆ, ಅವರು ದೇಶಕ್ಕಾಗಿ ತಮ್ಮ ಜೀವನವನ್ನೆ ಹೋರಾಟಕ್ಕಾಗಿ ಮುಡುಪಾಗಿಟ್ಟಿದ್ದರು ಎಂದು ಸ್ಮರಿಸಿಕೊಂಡ ಅವರು ಇಂದಿನ ಜನಾಂಗಕ್ಕೆ ಇಂತಹ ಅನೇಕ ಮಹನೀಯರ ಜೀವನ ಕಥೆಗಳು ಮಾರ್ಗದರ್ಶಕವಾಗಬೇಕು ಎಂದರು.ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್  ಮಾತನಾಡಿ, ಚುನಾವಣೆಗಳಂತಹ ಜವಾಬ್ದಾರಿಯುತ ಸೇವೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಅಧಿಕಾರಿ ಹಾಗೂ ಸಂಸ್ಥೆಗಳನ್ನು ಈ ಸಂದರ್ಭದಲ್ಲಿ ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ರಾಷ್ಟ್ರಮಟ್ಟದಲ್ಲಿ ಭಾರತ ಚುನಾವಣಾ ಆಯೋಗ ಕಳೆದ ಹತ್ತು ವರ್ಷಗಳಿಂದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸುತ್ತಿದೆ ಎಂದು ತಿಳಿಸಿದರು.

ಮತಗಟ್ಟೆಗಳಿಂದ ರಾಷ್ಟ್ರಮಟ್ಟದವರೆಗೆ ಈ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಐದು ಕೋಟಿ ಹತ್ತು ಲಕ್ಷಕ್ಕಿಂತ ಹೆಚ್ಚಿನ ಮತದಾರರಿದ್ದು, ರಾಜ್ಯದಲ್ಲಿ ಲಿಂಗಾನುಪಾತ ಕಳೆದ 2014ರಲ್ಲಿ 960 ಇತ್ತು ಪ್ರಸ್ತುತ ಅದು 979ಕ್ಕೆ ಏರಿಕೆಯಾಗಿರುವುದು ಹಾಗೂ ಮತದಾನದ ಶೇಕಡವಾರು ಹೆಚ್ಚಾಗಿರುವುದು ಉತ್ತಮ ಸಂಗತಿಗಳು ಎಂದು ಹೇಳಿದರು.ಇದೇ ಸಮಯದಲ್ಲಿ ಯುವ ಮತದಾರರು, ದಿವ್ಯಾಂಗರು, ಬುಡಕಟ್ಟು ಜನಾಂಗ ಸೇರಿದಂತೆ ಅನೇಕ ಹೊಸ ಮತದಾರರಿಗೆ ರಾಜ್ಯಪಾಲರು ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಿದರು. ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಸಹ ಸ್ವೀಕರಿಸಲಾಯಿತು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾದ ಬಿ.ಎಚ್. ಅನಿಲ್ ಕುಮಾರ್ ಅವರು ವಂದಿಸಿದರು.  ಅಪರ ಮುಖ್ಯ ಚುನಾವಣಾಧಿಕಾರಿ ಎಮ್.ಎನ್. ನಾಗಭೂಷಣ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

SCROLL FOR NEXT