ರಾಜ್ಯ

'ತಪ್ಪಾಗಿ ಕನ್ನಡ ಉಚ್ಛಾರಣೆ'; ಶ್ರೀರಾಮುಲುಗೆ ಕನ್ನಡ ಪುಸ್ತಕ ಕೊಟ್ಟ ಕಾಂಗ್ರೆಸ್ ನಾಯಕಿ

Srinivasamurthy VN

ಬೆಂಗಳೂರು: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ತಪ್ಪುತಪ್ಪಾಗಿ ಕನ್ನಡ ಮಾತನಾಡಿ ಸುದ್ದಿಗೆ ಗ್ರಾಸವಾಗಿದ್ದ ಸಚಿವ ಬಿ ಶ್ರೀರಾಮುಲು ಅವರಿಗೆ ಕಾಂಗ್ರೆಸ್ ನಾಯಕಿಯೊಬ್ಬರು ಕನ್ನಡ ಪುಸ್ತಕ ಕೊಟ್ಟು ಟಾಂಗ್ ನೀಡಿದ್ದಾರೆ.

ರಾಯಚೂರಿನಲ್ಲಿ ಭಾನುವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ್ದ ಆರೋಗ್ಯ ಸಚಿವ ಶ್ರೀರಾಮುಲು ತಪ್ಪು ತಪ್ಪಾಗಿ ಕನ್ನಡ ಮಾತನಾಡಿ ಮತ್ತೊಮ್ಮೆ ನಗೆ ಪಾಟಲಿಗೀಡಾಗಿದ್ದರು. ರಾಯಚೂರಿನಲ್ಲಿ ನಿನ್ನೆ ಗಣರಾಜ್ಯೋತ್ಸವದ ಭಾಷಣ ಮಾಡಿದ್ದ ಸಚಿವ ಶ್ರೀರಾಮುಲು ತಪ್ಪುತಪ್ಪಾಗಿ ಕನ್ನಡ ಮಾತನಾಡಿದ್ದರು. ಆರಂಭದಲ್ಲಿ ಜನವರಿ 26ರ ಗಣರಾಜ್ಯೋತ್ಸವ ಎಂದು ಹೇಳುವಲ್ಲೇ ಎಡವಿದ್ದ ಶ್ರೀರಾಮುಲು 'ಆಗಸ್ಟ್​ 15 ಗಣರಾಜ್ಯೋತ್ಸವ' ಎಂದು ಭಾಷಣವನ್ನು ಆರಂಭಿಸಿದ್ದರು. 'ಭಾರತೀಯ ನಾಗರಿಕರಿಗೆ ಸಾಮಾಜಿಕವಾಗಿ ನಾಯಿ ಕೊಟ್ಟ ದಿನವಿದು', 'ನಮ್ಮ ದೇಶ ವಿಶ್ವಕ್ಕೆ ಮಾಧುರಿಯಾಗಿದೆ' ಎಂದು ಹೇಳಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಶ್ರೀರಾಮುಲುಗೆ ತೆಲುಗು ಭಾಷೆಯ ಮೂಲಕ ಕನ್ನಡ ಕಲಿಯುವ ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಶ್ರೀರಾಮುಲು ಅವರಿಗೆ ಅಮೇಜಾನ್​ನಲ್ಲಿ ತೆಲುಗಿನಿಂದ ಕನ್ನಡ ಕಲಿಯುವ ಪುಸ್ತಕವೊಂದನ್ನು ಆರ್ಡರ್ ಮಾಡಿರುವ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಆ ಪುಸ್ತಕವನ್ನು ಬಳ್ಳಾರಿಯ ಶ್ರೀರಾಮುಲು ಅವರ ಕಚೇರಿಯ ವಿಳಾಸಕ್ಕೆ ಕಳುಹಿಸಿದ್ದಾರೆ. ಅಮೇಜಾನ್​ನಲ್ಲಿ ಕನ್ನಡ ಕಲಿಕೆಯ ಪುಸ್ತಕವನ್ನು ಖರೀದಿ ಮಾಡಿ, ಕಳುಹಿಸಿರುವ ವಿವರವನ್ನು ಕವಿತಾ ರೆಡ್ಡಿ ಟ್ವಿಟ್ಟರ್ ​ನಲ್ಲಿ ಶೇರ್ ಮಾಡಿಕೊಂಡು, ಸಚಿವ ಶ್ರೀರಾಮುಲುಗೆ ಟ್ಯಾಗ್ ಮಾಡಿದ್ದಾರೆ.

SCROLL FOR NEXT