ರಾಜ್ಯ

ಆರ್ ಪಿಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆ: ಕಳ್ಳತನವಾಗಿದ್ದ 35 ಮೆಟ್ರಿಕ್ ಟನ್ ಕಬ್ಬಿಣದ ಹಳಿ ವಶಕ್ಕೆ!

Srinivasamurthy VN

ಬೆಂಗಳೂರು: ಬೆಂಗಳೂರು ರೈಲ್ವೇ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈ ಹಿಂದೆ ಕಳ್ಳತನವಾಗಿದ್ದ ಇಲಾಖೆಯ ಸುಮಾರು 35 ಮೆಟ್ರಿಕ್ ಟನ್ ಕಬ್ಬಿಣದ ಹಳಿಗಳನ್ನು ವಶಕ್ಕೆ ಪಡೆದಿದ್ದಾರೆ.

ಹೌದು.. ಕೊರೋನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಬೆಂಗಳೂರು ರೈಲ್ವೈ ಇಲಾಖೆ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ಸುಮಾರು 7ಲಕ್ಷ ರೂ ಮೌಲ್ಯದ 35 ಮೆಟ್ರಿಕ್ ಟನ್ ಕಬ್ಬಿಣದ ರೈಲ್ವೈ ಹಳಿಗಳನ್ನು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಅಲ್ಲದೆ ರೈಲ್ವೇ ಹಳಿಗಳನ್ನು ಕದ್ದಿದ್ದ 4 ಮಂದಿ ಕಳ್ಳರ ಗ್ಯಾಂಗ್ ಅನ್ನು ಬಂಧಿಸಿದ್ದಾರೆ.

ಈ ರೈಲ್ವೇ ಹಳಿಗಳನ್ನು ಕರಗಿಸಿ ಕಳ್ಳರು ಬ್ಲೇಡ್ ಗಳನ್ನು ಮಾರುವ ಸಂಚು ರೂಪಿಸಿದ್ದರು. ಇದಕ್ಕಾಗಿ ತುಮಕೂರು ಜಿಲ್ಲೆಯ ದಾಬಸ್ ಪೇಟೆಯಲ್ಲಿರುವ ಎರಡು ಘಟಕಗಳಲ್ಲಿ ಸಿದ್ಧತೆ ಕೂಡ ನಡೆದಿತ್ತು. ಅಷ್ಟರೊಳಗೇ ಪೊಲೀಸರು ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿದ್ದಾರೆ. ಜೂನ್ 24ರಂದು ಇಬ್ಬರು ಕಳ್ಳರನ್ನು ಬಂಧಿಸಿದ್ದ ಪೊಲೀಸರು ಬಳಿಕ ಅವರು ನೀಡಿದ್ದ ಮಾಹಿತಿ ಮೇರೆಗೆ ಜೂನ್ 29ರಂದು ಮತ್ತಿಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. 

ಜೂನ್ 23ರಂದು ಹಳ್ಳಿಗಳ ಕಳ್ಳತನ ಸಂಬಂಧ ಅಧಿಕಾರಿಗಳು ದೂರು ಸಲ್ಲಿಕೆ ಮಾಡಿದ್ದರು. ಇದೀಗ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಎಲ್ಲ ನಾಲ್ಕೂ ಆರೋಪಿಗಳನ್ನು ಬಂಧಿಸಿ ಕಬ್ಬಿಣದ ಹಳಿಗಳನ್ನು ವಶಕ್ಕೆ ಪಡೆದಿದ್ದಾರೆ.

SCROLL FOR NEXT