ರಾಜ್ಯ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡವಲ್ಲಿ ವೈದ್ಯರಿಗೆ ತಂತ್ರಜ್ಞಾನ ಸಹಾಯ ಮಾಡಲಿದೆ: ಆರೋಗ್ಯ ಸಚಿವ ಶ್ರೀರಾಮುಲು

Manjula VN

ಬೆಂಗಳೂರು: ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ತಂತ್ರಜ್ಞಾನವು ವೈದ್ಯರಿಗೆ ಸಹಾಯ ಮಾಡಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಗುರುವಾರ ಹೇಳಿದ್ದಾರೆ. 

ಬಾಲಬ್ರೂಯಿಯಲ್ಲಿ ಗುರುವಾರ ಐಸಿಯು ಟೆಲಿಕಾರ್ಟ್'ಗೆ ರಿಮೋಟ್ ಮೂಲಕ ಚಾಲನೆ ನೀಡಿದ ಬಳಿಕ ಮಾತನಾಡಿರುವ ಅವರು, ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಲು ತಂತ್ರಜ್ಞಾನ ಸಹಾಯ ಮಾಡಲಿದೆ. ತಂತ್ರಜ್ಞಾನ ಬಳಕೆಯಿಂದ ದೂರದಿಂದಲೇ ವೈದ್ಯರು ಸೋಂಕಿರನ್ನು ಆರೈಕೆ ಮಾಡಬಹುದಾಗಿದೆ ಎಂದು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ಸೋಂಕಿತರು ಕೂಡ ತಮ್ಮ ಕುಟುಂಬಸ್ಥರೊಂದಿಗೆ ಭಾವನಾತ್ಮಕ ಬೆಂಬಲವನ್ನು ಪಡೆದುಕೊಳ್ಳಬಹುದಾಗಿದೆ. ಚಿಕಿತ್ಸೆ ನೀಡುವ ವೈದ್ಯರೊಂದಿಗೆ ಸೋಂಕಿತ ವ್ಯಕ್ತಿ ಕುಟುಂಬಸ್ಥರೂ ಕೂಡ ಮಾತುಕತೆ ನಡೆಸಬಹುದಾಗಿದೆ. ಹೀಗಾಗಿ ವಿಕ್ಟೋರಿಯಾ ಅಸ್ಪತ್ರೆ ಹಾಗೂ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ನಾವು ಈಗಾಗಲೇ ತಂತ್ರಜ್ಞಾನಗಳನ್ನು ಅಳವಡಿಸಿದ್ದೇವೆಂದು ತಿಳಿಸಿದ್ದಾರೆ. 

ಇದೇ ವೇಳೆ ಪ್ಲಾಸ್ಮಾ ಥೆರಪಿ ಕುರಿತು ಮಾತನಾಡಿರುವ ಅವರು, ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಪ್ಲಾಸ್ಮಾ ಥೆರಪಿ ನೀಡಲು ನಿರ್ಧರಿಸಲಾಗಿದೆ. ಪ್ಲಾಸ್ಮಾ ಬ್ಯಾಂಕ್'ಗಳನ್ನು ಎಲ್ಲಾ ಕೇಂದ್ರಗಳಲ್ಲಿ ಪ್ರಾರಂಭಿಸಿ ಅಗತ್ಯ ಇರುವವರಿಗೆ ನೀಡಲಾಗಿದೆ. ಇದರಿಂದ ಸೋಂಕಿತರು ಆದಷ್ಟು ಬೇಗ ಗುಣಮುಖರಾಗಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಆ್ಯಂಬುಲೆನ್ಸ್ ಸಮಸ್ಯೆ ಇಲ್ಲ. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಬಾಡಿಗೆಗೆ ತಂದು ವ್ಯವಸ್ಥೆ ಮಾಡಲಾಗುವುದು ಎಂದಿದ್ದಾರೆ. 
 

SCROLL FOR NEXT