ರಾಜ್ಯ

ಆ್ಯಂಬುಲೆನ್ಸ್'ಗೆ ಕಾದು ರಸ್ತೆಯಲ್ಲೇ ಪ್ರಾಣಬಿಟ್ಟ ವ್ಯಕ್ತಿ: 3 ಗಂಟೆಗಳ ಕಾಲ ಮಳೆಯಲ್ಲೇ ನೆನೆದ ಸೋಂಕಿತನ ಮೃತದೇಹ!

Manjula VN

ಬೆಂಗಳೂರು: ಕೊರೋನಾ ಸೋಂಕು ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ಸೇರಲು ಬೆಳಿಗ್ಗೆಯೇ ಕರೆ ಮಾಡಿದರೂ ಸಂಜೆ ನಾಲ್ಕು ಗಂಟೆಯಾದರೂ ಬಾರದ ಆ್ಯಂಬುಲೆನ್ಸ್, ಸೋಂಕಿತ ಉಸಿರಾಡಲು ಆಗದೇ ಮೃತಪಟ್ಟ ನಾಲ್ಕು ತಾಸಿನ ಬಳಿಕ ಶವ ತೆಗೆದುಕೊಂಡು ಹೋಗಲು ಬಂದ ಮನಕಲುಕುವ ಘಟನೆ ಶುಕ್ರವಾರ ನಗರದಲ್ಲಿ ನಡೆದಿದೆ. 

ಶ್ರೀನಗರದ ರಾಮಾಂಜನೇಯ ದೇವಸ್ಥಾನದ ರಸ್ತೆಯ 56 ವರ್ಷದ ವ್ಯಕ್ತಿ ಕಳೆದ ಮೂರು ದಿನಗಳ ಹಿಂದೆ ಕೊರೋನಾ ಪರೀಕ್ಷೆಗೊಳಗಾಗಿದ್ದರು. ಶುಕ್ರವಾರ ಬೆಳಿಗ್ಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ವ್ಯಕ್ತಿಯ ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲಾಗಲು ಆ್ಯಂಬುಲೆನ್ಸ್ ಕಳಿಸುವಂತೆ ದೂರವಾಣಿಯಲ್ಲಿ ತಿಳಿಸಿದ್ದರು. 14 ದಿನಕ್ಕೆ ಬೇಕಾಗುವ ಬಟ್ಟೆ ಇತ್ಯಾದಿ ತೆಗೆದುಕೊಂಡು ಮನೆ ಸಮೀಪ ಬರುವ ಬದಲು ಸಮೀಪದ ಬಸ್ ನಿಲ್ದಾಣಕ್ಕೆ ಆ್ಯಂಬುಲೆನ್ಸ್ ಕಳಿಸುವಂತೆ ತಿಳಿಸಿ ಕಾಯುತ್ತಿದ್ದರು. 

ಸಂಜೆ ನಾಲ್ಕು ಗಂಟೆಯಾದರೂ ಆ್ಯಂಬುಲೆನ್ಸ್ ಬಂದಿರಲಿಲ್ಲ. ಇದ್ದಕ್ಕಿದ್ದಂತೆ ಅವರು ಉಸಿರಾಡಲು ಆಗದೆ ನೆಲಕ್ಕುರುಳಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಮಧ್ಯೆ ಸುರಿದ ಮಳೆ ನಡುವೆ ಶವವನ್ನು ಅಂತ್ಯಸಂಸ್ಕಾರ ಮಾಡಲು ಆಗದೇ ಕುಟುಂಬದ ಸದಸ್ಯರು ರಸ್ತೆಯ ಮೇಲೆ ಶವವನ್ನು ಇಟ್ಟು ಗೋಳಾಡುತ್ತಿದ್ದರು. ಸುಮಾರು 8 ಗಂಟೆಗೆ ಬಂದ ಆ್ಯಂಬುಲೆನ್ಸ್ ಶವವನ್ನು ತೆಗೆದುಕೊಂಡು ಹೋಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. 

SCROLL FOR NEXT