ರಾಜ್ಯ

ಉಡುಪಿ: ಹೊರ ಹೋಗಲು ಅವಕಾಶ ನಿರಾಕರಣೆ, ಹೋಮ್ ಕ್ವಾರಂಟೈನ್ ನಲ್ಲಿದ್ದ ಬಾಲಕ ಆತ್ಮಹತ್ಯೆ 

Nagaraja AB

ಉಡುಪಿ: ಹೋಮ್ ಕ್ವಾರಂಟೈನ್ ನಲ್ಲಿದ್ದ 15 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮ ಬಳಿಯ ಗುಂಡ್ಮಿಯಲ್ಲಿ  ನಡೆದಿದೆ.

ಮನೆಯಲ್ಲಿ ಸೀಲಿಂಗ್‌ನಿಂದ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮೃತನನ್ನು ಕೋಟದ ವಿವೇಕ್ ಪ್ರೌಢಶಾಲೆಯ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಇತ್ತೀಚಿಗಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದ ಎನ್ನಲಾಗಿದೆ.

ಬಾಲಕನ ತಾಯಿ ಚೆಂಪಿ ಗ್ರಾಮದ ಬಳಿ ಮನೆಯೊಂದರಲ್ಲಿ ಮನೆಕೆಲಸ ಮಾಡುತ್ತಿದ್ದರು. ಮನೆ ಮಾಲೀಕರಿಗೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಕಾರ್ತಿಕ್ ಹಾಗೂ ಅವರ ತಾಯಿಯನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿತ್ತು. ಸ್ನೇಹಿತರೊಂದಿಗೆ ಹೊರಗಡೆ ಆಟವಾಡಲು ಅವಕಾಶ ನೀಡಿರಲಿಲ್ಲ. ಇದರಿಂದ ಬೇಸತ್ತು ಕಾರ್ತಿಕ್  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮೃತದೇಹದಿಂದ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಕೋವಿಡ್-19 ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ನಂತರ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

(ನಕಾರಾತ್ಮಕ ಚಿಂತನೆ ಅನುಭವಿಸುತ್ತಿದ್ದಲ್ಲಿ ಸೋಮವಾರದಿಂದ ಶನಿವಾರದವರೆಗೂ ಬೆಳಗ್ಗೆ 8ರಿಂದ ರಾತ್ರಿ 10 ಗಂಟೆಯವರೆಗೂ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ 02225521111 ಸಂಪರ್ಕಿಸಬಹುದು)

SCROLL FOR NEXT