ರಾಜ್ಯ

ಹಾಸನ: ಕೊರೊನಾಗೆ ಮತ್ತೊಂದು ಬಲಿ; ಮೃತರ ಸಂಖ್ಯೆ 12ಕ್ಕೆ ಏರಿಕೆ, 15 ದಿನ ಸಲೂನ್ ಶಾಪ್ ಬಂದ್

Srinivasamurthy VN

ಹಾಸನ: ಹಾಸನ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಬ್ಬರು ಮೃತಪಟ್ಟಿದ್ದು, ಆ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿಗೆ ಬಲಿಯಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಹಾಸನ ನಗರದ ಹೊರವಲಯದ 48 ವರ್ಷದ ಮಹಿಳೆ ಕೊರೋನಾ ಸೋಂಕಿನಿಂದ ಅಸುನೀಗಿದ್ದಾರೆ. ರಕ್ತದೊತ್ತಡ, ಮಧುಮೇಹ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಅವರು ಜು. 7 ರಂದು ಕೋವಿಡ್ ಅಸ್ಪತ್ರೆಗೆ ದಾಖಲಾಗಿದ್ದರು. ಜು. 8 ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ ಸತೀಶ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 568 ಕೊರೊನಾ ಪ್ರಕರಣ ಪತ್ತೆಯಾಗಿದ್ದು, 276 ಜನ ಡಿಸ್ಚಾರ್ಜ್ ಆಗಿದ್ದಾರೆ, 281 ಸಕ್ರಿಯ ಪ್ರಕರಣಗಳಿವೆ.

15 ದಿನ ಸಲೂನ್ ಶಾಪ್ ಬಂದ್
ಇತ್ತ ಮಾರಕ ಕೊರೊನಾ ವೈರಸ್ ಸಮುದಾಯಕ್ಕೆ ಹರಡುತ್ತಿರುವ ಆತಂಕ ಎದುರಾಗಿದ್ದು ಜಿಲ್ಲೆಯಾದ್ಯಂತ 15 ದಿನ ಸಲೂನ್ ಬಂದ್ ಮಾಡಲು ಸವಿತಾ ಸಮಾಜದವರು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್, ನಾವು ನಮ್ಮ ಸಮಾಜದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಕೊರೊನಾ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ಇದೇ ಜುಲೈ 11 ರಿಂದ ಜುಲೈ 26 ರವರೆಗೆ ಜಿಲ್ಲೆಯ ಎಲ್ಲಾ ಸಲೂನ್‍ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಲಕ್ಷಣ ಕಾಣುತ್ತಿದ್ದು, ಸೋಂಕಿತರು ಕೆಲವರು ಅದರ ಅರಿವಿಲ್ಲದೆ ಸಲೂನ್‍ಗೆ ಬರುವ ಸಾಧ್ಯತೆಯಿರುತ್ತದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಲಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಸಲೂನ್‍ನಲ್ಲಿ ಕರ್ತವ್ಯ ನಿರ್ವಹಿಸುವವರ ಅನುಕೂಲಕ್ಕಾಗಿ ಹದಿನೈದು ದಿನ ಹಾಸನ ಜಿಲ್ಲೆಯಲ್ಲಿ ಸಲೂನ್ ಬಂದ್ ಮಾಡುವುದಾಗಿ ರವಿಕುಮಾರ್ ಹೇಳಿದ್ದಾರೆ.

SCROLL FOR NEXT