ರಾಜ್ಯ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮೂವರು ಕೊರೊನಾದಿಂದ ಸಾವು: ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆ

Manjula VN

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.

ಜಿಲ್ಲೆಯ ಉಳ್ಳಾಲ, ಪುತ್ತೂರು ಮತ್ತು ಭಟ್ಕಳ ಮೂಲದ ಮೂವರು ಮೃತಪಟ್ಟಿದ್ದಾರೆ.

ಉಳ್ಳಾಲದ 62 ವರ್ಷದ ವೃದ್ಧೆ, ಪುತ್ತೂರು ಮೂಲದ 32 ವರ್ಷದ ಮಹಿಳೆ ಹಾಗೂ ಭಟ್ಕಳ ಮೂಲದ 60 ವರ್ಷದ ವ್ಯಕ್ತಿಯೊಬ್ಬರು ಇಂದು ಸಾವನ್ನಪ್ಪಿದ್ದಾರೆ.

ಈ ಪೈಕಿ ಇಬ್ಬರು ಮಹಿಳೆಯರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಭಟ್ಕಳ ಮೂಲದ 60 ವರ್ಷದ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೂವರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 29ಕ್ಕೇರಿಕೆಯಾಗಿದೆ.

ಪುತ್ತೂರಿನ ಮಹಿಳೆ ಕೋವಿಡ್‌ ಸೋಂಕಿನಿಂದಾಗಿ ಕಿಡ್ನಿ ವೈಫಲ್ಯದಿಂದ ನಿಧನರಾಗಿದ್ದಾರೆ. ಹೆರಿಗೆಗೆಂದು ಜೂನ್ 20ರಂದು ಅವರನ್ನು ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೂನ್ 26ರಂದು ಅವರಿಗೆ ಹೆರಿಗೆಯಾಗಿದೆ. ಎರಡು ದಿನಗಳ ನಂತರ ಅವರ ಗಂಟಲು ದ್ರವ ಮಾದರಿ ಪರೀಕ್ಷಿಸಿದಾಗ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ನಂತರ ಅವರನ್ನು ಮಗುವಿನ ಸಮೇತ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಜುಲೈ 5ರಂದು ವೆನ್ಲಾಕ್‌ನಿಂದ ಡಿಸ್ಟಾರ್ಜ್ ಆಗಿ ಕ್ವಾರಂಟೈನ್‌ನಲ್ಲಿದ್ದರು. ಜುಲೈ 6ರಂದು ಉಸಿರಾಟ ಸಮಸ್ಯೆ ಕಂಡುಬಂದಾಗ ಮತ್ತೆ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕಳೆದ ರಾತ್ರಿ ಕಿಡ್ನಿ ವೈಫಲ್ಯದಿಂದ ಅವರು ಮೃತಪಟ್ಟಿದ್ದಾರೆ. ಎರಡು ಹೆಣ್ಣು ಮಕ್ಕಳು ಹಾಗೂ ಇತ್ತೀಚೆಗೆ ಜನಿಸಿದ ನವಜಾತ ಶಿಶುವನ್ನು ಅವರು ಅಗಲಿದ್ದಾರೆ.

ಇಲ್ಲಿ ಸೋಂಕಿನ ಮೂಲ ಫಾದರ್ ಮುಲ್ಲರ್ಸ್ ಆಸ್ಪತ್ರೆಯಾಗಿದೆ. ಅವರು ಏನೂ ಅರಿಯದವರಂತೆ ನಟಿಸಿ, ಭರಪೂರ ಬಿಲ್ ನೀಡಿದ್ದಾರೆ. ಪಾವತಿಸಿದ ನಂತರವೇ ವೆನ್ಲಾಕ್‌ಗೆ ಕಳುಹಿಸಿದ್ದಾರೆ ಫಾದರ್ ಮುಲ್ಲರ್ಸ್‌ ನವರ ನಿರ್ಲಕ್ಷ್ಯವೇ ಇವರ ಸಾವಿಗೆ ಕಾರಣ ಎಂದು ಮೃತರ ಸಂಬಂಧ ನೌಫಾಲ್ ಸಾಲ್ಮರ ಆರೋಪಿಸಿದ್ದಾರೆ.

SCROLL FOR NEXT