ರಾಜ್ಯ

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯ: ಮುಷ್ಕರಕ್ಕೆ ಡಿಕೆಶಿ ಬೆಂಬಲ ಕೋರಿದ ಆಶಾ ಕಾರ್ಯಕರ್ತೆಯರು

Manjula VN

ಬೆಂಗಳೂರು: ವೇತನ ಹೆಚ್ಚಳ, ಕೊರೋನಾ ವೈರಸ್ ಉಚಿತ ಪರೀಕ್ಷೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.10ರಿಂದ ಆಶಾ ಕಾರ್ಯಕರ್ತೆಯರು ರಾಜ್ಯಾದ್ಯಂತ ನಡೆಸಲಿರುವ ಹೋರಾಟಕ್ಕೆ ಕಾಂಗ್ರೆಸ್ ಇದೀಗ ಬೆಂಬಲ ಸೂಚಿಸಿದೆ. 

ತಮ್ಮ ಬೇಡಿಕೆಗಳನ್ನು ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿರುವ ಆಶಾ ಕಾರ್ಯಕರ್ತೆಯರ ನಿಯೋಗ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಬೆಂಬಲ ಕೋರಿದೆ. 

ಅಹವಾಲನ್ನು ನಿವೇದಿಸಿಕೊಂಡು ಹೋರಾಟಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿಕೊಂಡರು. ಆಶಾ ಕಾರ್ಯಕರ್ತೆಯರ ಮನವಿಗೆ ಸ್ಪಂದಿಸಿದ ಶಿವಕುಮಾರ್ ಅವರು ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. 

ಪ್ರಸ್ತುತ ಇರುವ ಪ್ರೋತ್ಸಾಹ ಧನ ಮತ್ತು ಗೌರವ ಧನ ಎರಡನ್ನೂ ಒಟ್ಟಿಗೆ ಸೇರಿಸಿ ಮಾಸಿಕ ರೂ.12 ಸಾವಿರ ಗೌರವ ಧನ ನಿಗದಿಪಡಿಸಬೇಕು. ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಸಬೇಕು. 

ಕೊರೋನಾ ಸೋಂಕು ಪಾಸಿಟಿವ್ ಬಂದಿರುವ ಎಲ್ಲರಿಗೂ ಸಂಪೂರ್ಣ ಉಚಿತ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ಅವಧಿಯಲ್ಲಿ ಸಂಪೂರ್ಣ ಗೌರವ ಧನ ನೀಡಬೇಕು. ಹಾಗೆಯೇ ಅವರಿಗೆ ಪರಿಹಾರ ಘೋಷಿಸಬೇಕು. ಮಾಸ್ಕ್, ಹ್ಯಾಂಡ್ ಗ್ಲೌಸ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಜರ್ ಇತ್ಯಾದಿ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಜುಲೈ.10ರಂದು ಆಶಾ ಕಾರ್ಯಕರ್ತೆಯರು ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. 

SCROLL FOR NEXT