ರಾಜ್ಯ

ವೈದ್ಯ, ಶುಶ್ರೂಷಕಿಯರಿಗೆ ಕೊವಿಡ್‍ ಸೋಂಕು: ಸುಳ್ಯ ಸರ್ಕಾರಿ ಆಸ್ಪತ್ರೆ ಸೀಲ್‍ಡೌನ್‍

Raghavendra Adiga

ಸುಳ್ಯ: ವೈದ್ಯರೊಬ್ಬರು ಮತ್ತು ಮೂವರು ಶುಶ್ರೂಷಕಿಯರು ಸೇರಿದಂತೆ ಆರು ಜನರಿಗೆ ಕೊವಿಡ್‍ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಯನ್ನು ಎರಡು ದಿನಗಳವರೆಗೆ ಮುಚ್ಚಲಾಗಿದೆ.

ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರಿಗೆ ಕೆಲ ದಿನಗಳ ಹಿಂದೆ ಕೊವಿಡ್‍ ಸೋಂಕು ದೃಢಪಟ್ಟಿತ್ತು. ನಂತರ ವ್ಯಕ್ತಿಯನ್ನು ಮಂಗಳೂರಿನ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಮಧ್ಯೆ, ರೋಗಿಗೆ ಚಿಕಿತ್ಸೆ ನೀಡಿದ ಶುಶ್ರೂಷಕಿಗೆ ಸೋಂಕು ದೃಢಪಟ್ಟಿದೆ. ಬಳಿಕ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ, ಮೂವರು ಶುಶ್ರೂಷಕಿಯರು ಮತ್ತು ಡಯಾಲಿಸಿಸ್ ಘಟಕದ ಇಬ್ಬರು ತಂತ್ರಜ್ಞರಿಗೂ ಕೊರೊನಾವೈರಸ್‍ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜುಲೈ 9 ಮತ್ತು 10 ರಂದು ಆಸ್ಪತ್ರೆಯನ್ನು ಸೀಲ್‍ಡೌನ್‍ ಮಾಡಲಾಗಿದೆ. 

ಆಸ್ಪತ್ರೆಯಲ್ಲಿ 19 ರೋಗಿಗಳು ದಾಖಲಾಗಿದ್ದು, ಅವರಿಗೆ ವೈದ್ಯಕೀಯ ಅಧಿಕಾರಿ ಮತ್ತು ಮೂವರು ಶುಶ್ರೂಷಕಿಯರು ಚಿಕಿತ್ಸೆ ನೀಡುತ್ತಿದ್ದರು. ಆಸ್ಪತ್ರೆಯಲ್ಲಿ ಎರಡು ದಿನಗಳವರೆಗೆ ನೈರ್ಮಲ್ಯೀಕರಣ ಕಾರ್ಯಗಳನ್ನು ಕೈಗೊಳ್ಳಲಾಗುವುದರಿಂದ ಹೊಸ ರೋಗಿಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಡಯಾಲಿಸಿಸ್‌ಗಳನ್ನು ಸಹ ನಡೆಸಲಾಗುವುದಿಲ್ಲ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT