ರಾಜ್ಯ

ಬಾಗಲಕೋಟೆ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸದ ಮಧ್ಯೆ ಪ್ರವಾಹ ಭೀತಿ!

Srinivasamurthy VN

ಬಾಗಲಕೋಟೆ: ಬೆಳಗಾವಿ ಸುತ್ತಲಿನ ಪ್ರದೇಶ ಸೇರಿದಂತೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಹರಿಯುತ್ತಿರುವ ಕೃಷ್ಣ, ಘಟಪ್ರಭ ಮತ್ತು ಮಲಪ್ರಭ ನದಿಗಳು ತುಂಬಿ ಹರಿಯಲಾರಂಭಿಸಿರುವುದರಿಂದ ಜನತೆಯಲ್ಲಿ ಮತ್ತೊಮ್ಮೆ ಪ್ರವಾಹದ ಭೀತಿ ಕಾಣಿಸಿಕೊಂಡಿದೆ.

ವರ್ಷದಿಂದ ಭಯ, ಆತಂಕ ಮತ್ತು ಭೀತಿಯಲ್ಲೇ ಜನತೆ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ವರ್ಷದ ಹಿಂದೆ ಕೃಷ್ಣ, ಘಟಪ್ರಭ ಮತ್ತು ಮಲಪ್ರಭ ನದಿಗಳಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದಿಂದ ರೈತರು ಬೆಳೆದ ಬೆಳೆ, ಮನೆ, ಆಸ್ತಿಪಾಸ್ತಿ, ಜಾನುವಾರು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡರೆ, ನೇಕಾರರ ಮನೆಗಳಿಗೆ ನೀರು ನುಗ್ಗಿ ಮಗ್ಗಗಳು ಹಾಳಾದವು, ಲಕ್ಷಾಂತರ ಸೀರೆಗಳು ನೀರು ಪಾಲಾದವು. ಬೀದಿಗೆ ಬಿದ್ದಿದ್ದ ನೆರೆ ಸಂತ್ರಸ್ತರ ಪೈಕಿ ಸಾಕಷ್ಟು ಮಂದಿಗೆ ನೆರೆ ಪರಿಹಾರ ಎನ್ನುವುದು ಗಗನ ಕುಸುಮವಾಗಿದೆ. ಬಿದ್ದ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಪ್ರವಾಹ ಸ್ಥಿತಿ ನೆನೆಪಿಸಿದಲ್ಲಿ ಈಗಲೂ ಬೆಚ್ಚಿ ಬೀಳುತ್ತಾರೆ.

ಕಳೆದ ವರ್ಷದ ಪ್ರವಾಹದಿಂದ ಕಂಗೆಟ್ಟಿದ್ದ ಜನತೆ ಬದುಕು ಇನ್ನೇನು ಹಳಿಗೆ ಬರಲಿದೆ ಎನ್ನುತ್ತಿರುವಾಗಲೇ ಒಕ್ಕರಿಸಿದ ಮಹಾಮಾರಿ ಕೊರೋನಾ ಅಟ್ಟಹಾಸ ಇಂದಿಗೂ ಕಡಿಮೆ ಆಗಿಲ್ಲ. ಬದಲಿಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 
ಇದುವರೆಗೂ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಕೊರೋನಾ ವೈರಸ್ ಗ್ರಾಮೀಣ ಭಾಗಗಳಿಗೂ ವಿಸ್ತರಿಸಿದೆ. ಮಾನವೀಯ ಸಂಬಂಧಗಳಿಗೆ ಬೆಂಕಿ ಇಟ್ಟಿದೆ. ಜಿಲ್ಲಾಡಳಿತ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದರೂ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿಲ್ಲ. ಬದಲಿಗೆ ಹೆಚ್ಚುತ್ತಲೇ ಇದೆ. ಕೊರೋನಾ ಕಾಟದಿಂದ ಜನತೆ ಕಂಗಾಲಾಗಿರುವಾಗಲೇ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯಲ್ಲಿನ ಕೃಷ್ಣ, ಘಟಪ್ರಭ ಮತ್ತು ಮಲಪ್ರಭ ನದಿಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಮಳೆಯ ಪ್ರಮಾಣ ಹೆಚ್ಚುತ್ತಿರುವುದರಿಂದ ಯಾವುದೇ ಸಂದರ್ಭದಲ್ಲೂ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎನ್ನುವ ಸ್ಥಿತಿ ನದಿ ತೀರದ ಗ್ರಾಮಗಳಲ್ಲಿ ನಿರ್ಮಾಣವಾಗಿದೆ.

ಈಗಾಗಲೇ ಕೃಷ್ಣ ಮತ್ತು ಘಟಪ್ರಭ ನದಿಗಳು ತುಂಬಿ ಹರಿಯುತ್ತಿರುವುದರಿಂದ ಸೇತುವೆಗಳ ಸಂಚಾರ ಬಂದಾಗುತ್ತಿದೆ. ಈಗಾಗಲೇ ಜಿಲ್ಲೆ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದ ಬಳಿ ಘಟಪ್ರಭ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಮೇಲೆ ನದಿ ಹರಿಯುತ್ತಿದೆ. ಮಲಪ್ರಭ ನದಿಯಲ್ಲೂ ಸ್ಥಿತಿ ವಿಭಿನ್ನವಾಗಿಲ್ಲ. ಒಂದೆಡೆ ಕೊರೋನಾ ಕಾಟ, ಇನ್ನೊಂದು ಕಡೆ ಪ್ರವಾಹ ಭೀತಿಯಿಂದ ಜನತೆ ದಿಕ್ಕು ಕಾಣದಂತಾಗಿದ್ದಾರೆ. ವರ್ಷದಿಂದ ಜನತೆ ಭಯ ಮತ್ತು ಆತಂಕದಲ್ಲೇ ಕಾಲ ನೂಕುತ್ತಿರುವಾಗ ನದಿಗಳಲ್ಲಿ ಮತ್ತೆ ಪ್ರವಾಹ ಭೀತಿ ಕಾಣಿಸಿಕೊಂಡಿರುವುದು ಮುಂದೇನು ಎನ್ನುವ ಸ್ಥಿತಿ ನಿರ್ಮಾಣವಾಗಿದೆ.

ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಹರಸಾಹಸ ಪಡುತ್ತಿರುವಾಗಲೇ ಪ್ರವಾಹ ಭೀತಿ ಕಾಣಿಸಿಕೊಂಡಿರುವುದರಿಂದ ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ದವಾಗುತ್ತಿದೆ. ಕೊರೋನಾ ಸಂಕಷ್ಟದ ಮಧ್ಯೆ ಪ್ರವಾಹ ಸ್ಥಿತಿಯನ್ನು ಸಮರ್ಥವಾಗಿ ಎದುರಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಜಿಲ್ಲಾಡಳಿತ ಕೂಡ ಈಗಾಗಲೇ ಪ್ರವಾಹ ಸ್ಥಿತಿ ಎದುರಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ. ನದಿ ತೀರದ ಗ್ರಾಮಗಳಲ್ಲಿ ಎಚ್ಚರಿಕೆ ಕ್ರಮಗಳಿಗೆ ಮುಂದಾಗಿದೆ. ಸದ್ಯ ಜಿಲ್ಲಾಡಳಿತ ಕೊರೋನಾ ವೈರಸ್ ಹರಡುವಿಕೆ ನಿಯಂತ್ರಣದ ಜತೆ ಜತೆಗೆ ಜಿಲ್ಲೆಯ ನದಿಗಳಲ್ಲಿ ಉಂಟಾಗಲಿರುವ ಪ್ರವಾಹ ಸ್ಥಿತಿಯಿಂದ ಜನತೆಯನ್ನು ಕಾಪಾಡಬೇಕಿದೆ.

ಒಟ್ಟಾರೆ ವರ್ಷದಿಂದ ಪ್ರವಾಹ, ಕೊರೋನಾ ಸಂಕಷ್ಟದಿಂದ ಬಳಲುತ್ತಿರುವ ಸನ್ನಿವೇಶದಲ್ಲೇ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎನ್ನುತ್ತ ತಮ್ಮನ್ನು ತಾವೇ ಜನ ಹಳಿದುಕೊಳ್ಳುತ್ತಿದ್ದಾರೆ. ಮಾನವನ ಮೇಲೆ ಪ್ರಕೃತಿ ಮುನಿಸಿಕೊಂಡಿರುವಾಗ ಯಾರು ತಾನೇ ಏನು ಮಾಡಲು ಸಾಧ್ಯ ಎನ್ನುವ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ವರದಿ: ವಿಠ್ಠಲ ಆರ್. ಬಲಕುಂದಿ

SCROLL FOR NEXT