ರಾಜ್ಯ

ರವಿ ಪೂಜಾರಿ ವಿರುದ್ಧ ನ್ಯಾಯಾಲಯಕ್ಕೆ 4ನೇ ಚಾರ್ಜ್ ಶೀಟ್ ಸಲ್ಲಿಸಿದ ಸಿಸಿಬಿ

Lingaraj Badiger

ಬೆಂಗಳೂರು: ಭೂಗತ ಪಾತಕಿ ‌ರವಿ ಪೂಜಾರಿ ವಿರುದ್ಧ ಸಿಸಿಬಿ ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಮತ್ತೊಂದು‌ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

2009ರಲ್ಲಿ ರವಿ ಪೂಜಾರಿ ಇಂದಿರಾನಗರದ ಬಳಿಯ ಖಾಸಗಿ ಚಾನಲ್ ಮಾಲೀಕ ಜಮಾಲ್ ಎಂಬುವವರಿಗೆ ಬೆದರಿಕೆ ಕರೆ ಮಾಡಿ‌ ಹಣಕ್ಕೆ ಬೇಡಿಕೆ ಇಟ್ಟಿದ್ದ. ಆದರೆ, ಇದ್ಯಾವುದಕ್ಕೂ ಹೆದರದ ಮಾಲೀಕ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ರವಿ ‌ಪೂಜಾರಿ, ತನ್ನ ಸಹಚರರನ್ನು ಕಳುಹಿಸಿ ಹಲ್ಲೆ ನಡೆಸಿದ್ದನು.
ಘಟನೆಗೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ನಂತರ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಪೊಲೀಸರು ರವಿ ಪೂಜಾರಿಯನ್ನು ವಿಚಾರಣೆಗೆ ಒಳಪಡಿಸಿದಾಗ ಖಾಸಗಿ ಚಾನಲ್ ಮಾಲೀಕನ ಮೇಲೆ ನಡೆದ ಹಲ್ಲೆ ಹಾಗೂ ಬೆದರಿಕೆ ವಿಚಾರ ಕುರಿತು ರವಿ ಪೂಜಾರಿ ಬಾಯ್ಬಿಟ್ಟಿದ್ದನು. ಹೀಗಾಗಿ ಈ ಬಗ್ಗೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಇದುವರೆಗೆ ನಾಲ್ಕು ಪ್ರಕರಣಗಳಲ್ಲಿ ಪೂಜಾರಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಸದ್ಯ ರವಿ ಪೂಜಾರಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದ ನಂತರ ಸಿಸಿಬಿ ಪೊಲೀಸರು ಪೂಜಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

SCROLL FOR NEXT