ರಾಜ್ಯ

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸ ಸಿಬ್ಬಂದಿಗೆ ಕೊರೋನಾ: ಕಾವೇರಿಯಲ್ಲಿ ಸಿಎಂ ಕ್ವಾರಂಟೈನ್!

Shilpa D

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರಿಗೂ ಕೊರೋನಾ ಆತಂಕ ತಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಯಡಿಯೂರಪ್ಪ ಭಾಗವಹಿಸಬೇಕಾಗಿದ್ದ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. 

ಮುಖ್ಯಮಂತ್ರಿ ಯಡಿಯೂರಪ್ಪ ಇಂದು ನಿವೃತ್ತಿ ಹೊಂದಲಿರುವ ವಿಧಾನಪರಿಷತ್‌ ಸದಸ್ಯರ ಬೀಳ್ಕೊಡುಗೆ ಸಮಾರಂಭ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿಗದಿಯಾಗಿತ್ತು. ಆದರೆ ಶಕ್ತಿಸೌಧದಲ್ಲೂ ಕೊರೊನಾ ಆತಂಕ ಇರುವುದರಿಂದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರು ಭಾಗಿಯಾಗದೆ ಮನೆಯಲ್ಲಿ ಕ್ವಾರಂಟೈನ್ ಆಗಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಗೃಹ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲೆಕ್ಟ್ರಿಷಿಯನ್, ಸಿಎಂ ಅವರ ಬೆಂಗಾವಲು ವಾಹನದ ಚಾಲಕ ಹಾಗೂ ಧವಳಗಿರಿ ನಿವಾಸದಲ್ಲಿ ಅಡುಗೆ ಕೆಲಸದವನಿಗೆ ಕೊರೋನಾ ಸೋಂಕು ಧೃಡಪಟ್ಟಿದೆ. ಹೀಗಾಗಿ ಮುಖ್ಯಮಂತ್ರಿ ನಿವಾಸ, ಗೃಹ ಕಚೇರಿ ಸೇರಿದಂತೆ ಎಲ್ಲೆಡೆ ಸ್ಯಾನಿಟೈಸ್ ಮಾಡಲಾಗಿದ್ದು,ಕೃಷ್ಣಾದಲ್ಲಿ ಮೂರು ದಿನಗಳು ಯಾವುದೇ ಕಾರ್ಯಕ್ರಮ ನಿಗದಿಯಾಗಿಲ್ಲ.

ಮುಖ್ಯಮಂತ್ರಿ ಅವರ ಆಪ್ತ ಸಿಬ್ಬಂದಿ ಕಾರು ಚಾಲಕ ಹಾಗೂ ಭದ್ರತಾ ಸಿಬ್ಬಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅವರನ್ನು ಕೊರೋನಾ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ ಎನ್ನಲಾಗಿದೆ.

ಶುಕ್ರವಾರ, ಶನಿವಾರ, ಭಾನುವಾರ ರಜೆ ಇರುವುದರಿಂದ ಮೂರು ದಿನಗಳ ಕಾಲ ಯಾವುದೇ ಕಾರ್ಯಕ್ರಮ ದಲ್ಲಿ ಭಾಗಿಯಾಗದೇ ಇರಲು ಮುಖ್ಯಮಂತ್ರಿ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.ಸದ್ಯ ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲೇ ಬಿಎಸ್‌ ಯಡಿಯೂರಪ್ಪ ಕ್ವಾರಂಟೈನ್ ಆಗಲಿದ್ದಾರೆ ಎಂಬ ಮಾಹಿತಿ ಇದೆ.

ಈ ಕಾರಣಕ್ಕಾಗಿ ಎಲ್ಲಾ ಕಾರ್ಯಚಟುವಟಿಕೆಗಳನ್ನು ವಿಧಾನಸೌಧಕ್ಕೆ ವರ್ಗಾಯಿಸಲಾಗಿತ್ತು. ಇದೀಗ ವಿಧಾನ ಸೌಧದಲ್ಲೂ ಕೊರೊನಾ ಆತಂಕ ಎದುರಾಗಿರುವುದರಿಂದ ಈ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ ಎಂದು ತಿಳಿದುಬಂದಿದೆ. ಇತ್ತ ವಿಧಾನ ಸೌಧದ ಪೊಲೀಸ್ ಠಾಣೆಯಲ್ಲಿ ಓರ್ವ ಪೊಲೀಸರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಶಕ್ತಿ ಸೌಧದ ಪೊಲೀಸ್ ಠಾಣೆಗೆ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಲಾಗಿದೆ.ಜೊತೆಗೆ ವಿಧಾನ ಸೌಧಕ್ಕೂ ಸ್ಯಾನಿಟೈಸ್ ಮಾಡಲಾಗುತ್ತಿದೆ.

SCROLL FOR NEXT