ರಾಜ್ಯ

ಚಿತ್ರದುರ್ಗ, ಚಾಮರಾಜನಗರದಲ್ಲಿ ಕೊರೊನಾಗೆ ಮೊದಲ ಬಲಿ, ರಾಜ್ಯಾದ್ಯಂತ ಇಂದು 70 ಸಾವು

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಶನಿವಾರ ಒಂದೇ ದಿನ ಬರೋಬ್ಬರಿ 70 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 613ಕ್ಕೇರಿಕೆಯಾಗಿದೆ.

ಇಂದು ರಾಜ್ಯದಲ್ಲಿ ಒಟ್ಟು  2,798 ಜನಕ್ಕೆ ಕೊರೊನಾ ಸೋಂಕು ತಗುಲಿರೋದು ಖಚಿತವಾಗಿದ್ದು, ಇತ್ತ ಮಹಾನಗರಿ ಬೆಂಗಳೂರಿನಲ್ಲೂ ಕೊರೋನಾದ ರೌದ್ರ ನರ್ತನ ಮುಂದುವರಿದಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದೇ ದಿನ 1,533 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬೆಂಗಳೂರು 1,533, ದಕ್ಷಿಣ ಕನ್ನಡ 186, ಉಡುಪಿ 90, ಮೈಸೂರು 83, ತುಮಕೂರು 78, ಧಾರವಾಡ 77, ಯಾದಗಿರಿ 74, ದಾವಣಗೆರೆ 72, ಕಲಬುರಗಿ 65, ಬಳ್ಳಾರಿ 65, ಬೀದರ್ 63, ವಿಜಯಪುರ 48, ಉತ್ತರ ಕನ್ನಡ 40, ಗದಗ 40, ಬಾಗಲಕೋಟೆ 37, ಹಾಸನ 34, ರಾಮನಗರ 30, ಶಿವಮೊಗ್ಗ 26, ಮಂಡ್ಯ 23, ಕೊಪ್ಪಳ 23, ಚಿಕ್ಕಬಳ್ಳಾಪುರ 20, ಚಾಮರಾಜನಗರ 17, ಹಾವೇರಿ 16, ರಾಯಚೂರು 14, ಕೋಲಾರ 12, ಕೊಡಗು 12, ಚಿತ್ರದುರ್ಗ 9, ಬೆಂಗಳೂರು ಗ್ರಾಮಾಂತರ 5, ಬೆಳಗಾವಿ 3 ಮತ್ತು ಚಿಕ್ಕಮಗಳೂರಿನಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿವೆ.

ಇಂದು 880 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 504 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಂದು ಒಟ್ಟು 70 ಜನರು ಕೊರೊನಾಗೆ ಬಲಿಯಾಗಿದ್ದು, ಇದುವರೆಗೂ 613 ಸೋಂಕಿತರು ಸಾವನ್ನಪ್ಪಿದ್ದಾರೆ. ಒಟ್ಟು 36,216 ಪ್ರಕರಣಗಳಲ್ಲಿ 20,883 ಸಕ್ರಿಯ ಕೇಸ್ ಗಳಿವೆ.

ಚಿತ್ರದುರ್ಗ, ಚಾಮರಾಜನಗರದಲ್ಲಿ ಕೊರೋನಾಗೆ ಮೊದಲ ಬಲಿ, ರಾಜ್ಯಾದ್ಯಂತ ಇಂದು 70 ಸಾವು
ಚಿತ್ರದುರ್ಗ ಮತ್ತು ಚಾಮರಾಜನಗರದಲ್ಲಿ ಕೊರೋನಾಗೆ ಮೊದಲ ಬಲಿಯಾಗಿದ್ದು, ಚಿತ್ರದುರ್ಗದಲ್ಲಿ ಹಿರಿಯೂರು ಮೂಲದ 75 ವರ್ಷದ ವೃದ್ಧೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಮಗನ ಪ್ರಾಥಮಿಕ ಸಂಪರ್ಕದಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿತ್ತು. ಇಂದು ಹಿರಿಯೂರಿನ ನಾಲ್ವರಿಗೆ ಹಾಗೂ ಚಿತ್ರದುರ್ಗದ ಓರ್ವ ಸೇರಿದಂತೆ ಒಟ್ಟು ಐವರಿಗೆ ಸೋಂಕು ತಗುಲಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 103ಕ್ಕೆ ಏರಿಕೆಯಾಗಿದೆ. ಹಿರಿಯೂರಿನ 56 ವರ್ಷದ ಪುರುಷ, 44 ವರ್ಷದ ಮಹಿಳೆ, 54 ವರ್ಷದ ಮಹಿಳೆ, 22 ವರ್ಷದ ಪುರುಷ ಹಾಗೂ ಚಿತ್ರದುರ್ಗದ 39 ವರ್ಷದ ಪುರುಷ ಸೇರಿದಂತೆ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಅಂತೆಯೇ  ಗಡಿ ಜಿಲ್ಲೆ ಚಾಮರಾಜನಗರದಲ್ಲಿ ದಿನೇ ದಿನೇ ಕೊರೊನಾ ಅರ್ಭಟ ಹೆಚ್ಚಾಗುತ್ತಿದ್ದು, ಮಹಾಮಾರಿ ಜಿಲ್ಲೆಯಲ್ಲಿ ಇಂದು ಮೊದಲ ಬಲಿ ಪಡೆದಿದೆ. ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ 58 ವರ್ಷದ ವ್ಯಕ್ತಿ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಾಗಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ವ್ಯಕ್ತಿ ಕೊರೊನಾದಿಂದ ಸಾವನ್ನಪ್ಪಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಸಂಖ್ಯೆ 163ಕ್ಕೆ ಹೆಚ್ಚಾಗಿದ್ದು, ಪ್ರಸ್ತುತ 86 ಸಕ್ರಿಯ ಪ್ರಕರಣಗಳಿವೆ. ಡಿಸ್ಚಾರ್ಜ್ ಆದವರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ.

ಗಡಿ ಜಿಲ್ಲೆ ಬೀದರ್ ನಲ್ಲಿ ಕೊರೊನಾಗೆ ಮತ್ತೊಬ್ಬರು ಬಲಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಉಸಿರಾಟ ಹಾಗೂ ಜ್ವರದಿಂದ ಬಳಲುತ್ತಿದ್ದ ಬೀದರ್‍ನ ಓಲ್ಡ್ ಸಿಟಿಯ 40 ವರ್ಷದ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದಾರೆ. ಅಲ್ಲದೆ ಇಂದು 63 ಕೊರೊನಾ ಪಾಸಿಟಿವ್ ಪ್ರಕರಣಗಳು ಧೃಡವಾಗಿವೆ. ಹುಮ್ನಬಾದ್ 39, ಬಾಲ್ಕಿ 8, ಕಮಲಾನಗರ 8, ಔರಾದ್ 4, ಬಸವಕಲ್ಯಾಣದಲ್ಲಿ 4 ಸೇರಿದಂತೆ ಒಟ್ಟು 63 ಜನರಿಗೆ ಸೋಂಕು ತಗುಲಿದೆ.

SCROLL FOR NEXT