ರಾಜ್ಯ

ಹಾಸನ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಯ ಅಗರ: ಡಿಸ್ಚಾರ್ಜ್ ಆದ ರೋಗಿಗಳಿಂದ ದೂರುಗಳು

Nagaraja AB

ಹಾಸನ: ಹಾಸನದ ನಿಗದಿತ ಕೋವಿಡ್ -19 ಆಸ್ಪತ್ರೆ ಅವ್ಯವಸ್ಥೆಯ ಅಗರವಾಗಿರುವುದಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಅನೇಕ ರೋಗಿಗಳು ದೂರುಗಳನ್ನು ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯ ಒಳಗಡೆ ರೋಗಿಗಳ ನಡುವಣ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಿಲ್ಲ, ಕುಡಿಯಲು ಹಾಗೂ ಸ್ನಾನ ಮಾಡಲು ಬಿಸಿ ನೀರಿನ ವ್ಯವಸ್ಥೆ ಇಲ್ಲ ಎಂದು ಇತ್ತೀಚಿಗೆ ಆಸ್ಪತ್ರೆಯಿಂದ ಬಿಡುಗಡೆಯಾದ 50 ವರ್ಷದ ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ.

ಹಳೆಯ , ಹೊಸ ರೋಗಿಗಳನ್ನು ಸೇರಿಸಿ ಒಂದೇ ವಾರ್ಡ್ ನಲ್ಲಿ ಹಾಕಲಾಗುತ್ತದೆ. ಎಲ್ಲಾ ರೋಗಿಗಳಿಗೂ ಒಂದೇ ಶೌಚಾಲಯವನ್ನು ಬಳಸಬೇಕು, ದಾಖಲಾಗುವಾಗ ಮಾತ್ರ ವೈದ್ಯರು ವಾರ್ಡ್ ಗೆ ಬರುತ್ತಾರೆ ಎಂದು ಅವರು ಹೇಳಿದರು.

ಆಶಾ ಕಾರ್ಯಕರ್ತೆಯರು ಕೆಲವು ರೋಗಿಗಳಿಗೆ ಮಾತ್ರ ಹೊರಗಡೆಯ ಊಟ ತಂದುಕೊಡುವ ಮೂಲಕ ತಾರತಮ್ಯ ಮಾಡುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರೊಬ್ಬರು ಆರೋಪಿಸಿದರು. 

ಆದಾಗ್ಯೂ, ಈ ಆರೋಪಗಳನ್ನು ಅಲ್ಲಗಳೆದಿರುವ ಜಿಲ್ಲಾ ಶಸ್ತ್ರ್ರ ಚಿಕಿತ್ಸಕ ಡಾ. ಕೃಷ್ಣಕುಮಾರ್, ಸರ್ಕಾರದ ನಿರ್ದೇಶದಂತೆ ರೋಗಿಗಳಿಗೆ ಸೌಕರ್ಯ ಹಾಗೂ ಚಿಕಿತ್ಸೆ ನೀಡಲಾಗುತ್ತಿದೆ. ಎಷ್ಟೇ ಮನವಿ ಮಾಡಿಕೊಂಡರೂ ರೋಗಿಗಳು ಸಾಮಾಜಿಕ ಅಂತರ ಪಾಲಿಸುತ್ತಿಲ್ಲ. ಆರೋಗ್ಯ ಕಾರ್ಯಕರ್ತರು ಆಗಾಗ್ಗೆ ವಾರ್ಡ್ ಗಳಿಗೆ ಭೇಟಿ ನೀಡುವ ಮೂಲಕ ಸೌಕರ್ಯಗಳನ್ನು ತಪಾಸಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

SCROLL FOR NEXT