ರಾಜ್ಯ

ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಎಸ್ಎಸ್ಎಲ್ಸಿ ಮೌಲ್ಯಮಾಪನ ಮುಂದೂಡಿಕೆ: ಸುರೇಶ್ ಕುಮಾರ್

Lingaraj Badiger

ಬೆಂಗಳೂರು: ಇತ್ತೀಚಿಗಷ್ಟೇ ಮುಕ್ತಾಯವಾದ 2020ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯ ಮೌಲ್ಯಮಾಪನ ಕಾರ್ಯವು ಸೋಮವಾರದಿಂದ ರಾಜ್ಯದ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಪ್ರಾರಂಭವಾಗಬೇಕಿದೆ. ಆದರೆ ರಾಜ್ಯ ಸರ್ಕಾರ ಜುಲೈ 14 ರಿಂದ 22 ವರೆಗೆ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ಮೌಲ್ಯಮಾಪನ ಕಾರ್ಯವು ನಾಳೆಯಿಂದ ನಿಗದಿಯಂತೆ ನಡೆಯಲಿದೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಮೌಲ್ಯಮಾಪನ ಮುಂದೂಡಿಕೆಯಾಗಿದ್ದು, ಹೊಸ ದಿನಾಂಕವನ್ನು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಶಿಕ್ಷಣ‌ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಬೊಮ್ಮನಹಳ್ಳಿ ವಲಯಕ್ಕೆ ಕೋವಿಡ್-19 ಸೋಂಕಿತ ರೋಗಿಗಳಿಗಾಗಿ ವಾರ್ಡ್ ಗೆ ತಲಾ ಒಂದರಂತೆ ಎಲ್ಲಾ ವಾರ್ಡ್ ಗಳಿಗೂ ಆಂಬುಲೆನ್ಸ್ ವಾಹನಗಳನ್ನು ವ್ಯವಸ್ಥೆ ಮಾಡಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಬೊಮ್ಮನಹಳ್ಳಿ ವಲಯ ಕೊರೋನಾ ಉಸ್ತುವಾರಿಗೆ ವಹಿಸಿಕೊಂಡಿರುವ ಸುರೇಶ್ ಕುಮಾರ್ ಅವರು ಇಂದು ಬಿಬಿಎಂಪಿ ಜಂಟ ಆಯುಕ್ತರ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಕೋವಿಡ್ ಪರೀಕ್ಷೆ ಫಲಿತಾಂಶ ಬರಲು ಸರಾಸರಿ ನಾಲ್ಕರಿಂದ ಐದು ದಿನಗಳಾಗುತ್ತಿದೆ. ಇನ್ನು ಮುಂದೆ ಒಂದು ದಿನದಲ್ಲಿ ಫಲಿತಾಂಶ ಬರುವಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

SCROLL FOR NEXT