ರಾಜ್ಯ

ಕೊರೋನಾ ಪರೀಕ್ಷಾ ದಿನವೇ ವರದಿ ನೀಡಿ: ರಾಮನಗರವನ್ನು ಲಾಕ್ ಡೌನ್ ಮಾಡಿ: ಎಚ್ ಡಿ ಕುಮಾರಸ್ವಾಮಿ 

Shilpa D

ರಾಮನಗರ: ಕೊರೋನಾ ವೈರಸ್ ಪರೀಕ್ಷೆ ನಡೆಸಿದ ದಿನವೇ ವರದಿ ನೀಡಬೇಕೆಂದು ಹಾಗೂ ರಾಮನಗರ ಜಿಲ್ಲೆಯನ್ನು ಲಾಕ್ ಡೌನ್ ಮಾಡುವಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕೊರೊನಾವೈರಸ್ ರೌದ್ರನರ್ತನಕ್ಕೆ ರಾಜ್ಯ ರಾಜಧಾನಿ ತತ್ತರಿಸಿ ಹೋಗಿದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಂತೆ ಇರುವ ರಾಮನಗರ ಜಿಲ್ಲೆಯನ್ನೂ ಲಾಕ್ ಡೌನ್ ಮಾಡುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದ್ದಾರೆ. ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ರಾಮನಗರ ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಭಾನುವಾರ ಮಾಜಿ ಸಿಎಂ ಕುಮಾರಸ್ವಾಮಿ ಸಮಾಲೋಚನೆ ನಡೆಸಿದರು. ಈ ವೇಳೆ ರಾಮನಗರ ಲಾಕ್‌ ಡೌನ್‌ ಅಗತ್ಯತೆ ಬಗ್ಗೆ ವಿವರಿಸಿದ್ದಾರೆ. 

ಗಂಟಲು ದ್ರವ ಮಾದರಿ ಸಂಗ್ರಹಿಸಿದ ದಿನವೇ ಪರೀಕ್ಷಾ ವರದಿ ಬಂದರೇ ಹೆಚ್ಚು ಜನರ ಸಂಪರ್ಕವನ್ನು ತಪ್ಪಿಸಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುವುದನ್ನು ತಪ್ಪಿಸಬಹುದಾಗಿದೆ. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನೊಂದಿಗೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲೂಕುಗಳಿಗಿಂತಲೂ ಬೆಂಗಳೂರಿಗೆ ಹೆಚ್ಚು ಹತ್ತಿರವಿರುವ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಿಂತಲೂ ಅಧಿಕ ಸೋಂಕಿನ ಪ್ರಕರಣಗಳನ್ನು ಹೊಂದಿರುವ ರಾಮನಗರ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡಲೇಬೇಕಾಗಿದೆ ಎಂದು ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ಲಾಕ್ ಡೌನ್ ಗೆ ಸರ್ಕಾರ ನಿರ್ಧಾರ ಮಾಡಿರುವ ಬೆನ್ನಲ್ಲೇ ಸರಕು ಸಾಗಣೆ ವಾಹನಗಳನ್ನು ಹೊರತುಪಡಿಸಿ ಅಂತರ್ ಜಿಲ್ಲಾ ಸಂಚಾರವನ್ನು ನಿರ್ಬಂಧಿಸುವಂತೆಯೂ ಕುಮಾರಸ್ವಾಮಿ ಹೇಳಿದ್ದಾರೆ,

SCROLL FOR NEXT