ರಾಜ್ಯ

ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರಿಗೆ '10 ಸಾವಿರ ರಿಸ್ಕ್ ಅಲೆಯನ್ಸ್' ಘೋಷಣೆ

Srinivasamurthy VN

ಬೆಂಗಳೂರು: ಕೊರೋನಾ ವೈರಸ್ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ತಮ್ಮ ಜೀವ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರಿಗೆ ರಾಜ್ಯ ಸರ್ಕಾರ ಶುಭಸುದ್ದಿ ನೀಡಿದ್ದು, ಮಾಸಿಕ 10 ಸಾವಿರ ರೂ ರಿಸ್ಕ್ ಅಲೆಯನ್ಸ್ ಘೋಷಣೆ ಮಾಡಿದೆ.

ಹೌದು... ರಾಜ್ಯಾದ್ಯಂತ ಕೋವಿಡ್ ಕೇರ್ ಸೆಂಟರ್ ಗಳಲ್ಲಿ, ಕೊರೋನಾ ವಾರಿಯರ್ಸ್ ಗಳಾಗಿ ಆರೋಗ್ಯ ಇಲಾಖೆಯ ಡಿ ಗ್ರೂಪ್ ನೌಕರರು ಪಿಪಿಇ ಕಿಟ್ ಧರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಡಿ ಗ್ರೂಪ್ ನೌಕರರಿಗೆ ಅವರ ಕರ್ತವ್ಯಕ್ಕೆ ಪ್ರೋತ್ಸಾಹ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ರಿಸ್ಕ್ ಅಲಯನ್ಸ್ ಭತ್ಯೆ ನೀಡಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಅದರಂತೆ ಮುಂದಿನ 6 ತಿಂಗಳವರೆಗೆ ಡಿ ಗ್ರೂಪ್ ನೌಕರರಿಗೆ ಅವರ ವೇತನವಲ್ಲದೇ 10 ಸಾವಿರ ರೂ ಗಳನ್ನು ಹೆಚ್ಚುವರಿಯಾಗಿ ಪ್ರತಿ ತಿಂಗಳು ರಿಸ್ಕ್ ಅಲೆಯನ್ಸ್ ಭತ್ಯೆ ನೀಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಈ ಕುರಿತಂತೆ ಮಾಹಿತಿ ನೀಡಿದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಶಿವಶಂಕರ್ ಅವರು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಕೋವಿಡ್ ಹೆಲ್ತ್ ಸೆಂಟರ್, ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಕೋವಿಡ್-19 ಸಲುವಾಗಿ ಪಿಪಿಇ ಕಿಟ್ ಧರಿಸಿ, ಕಾರ್ಯ ನಿರ್ವಹಿಸುತ್ತಿರುವ ಗ್ರೂಪ್-ಡಿ ನೌಕರರುಗಳಿಗೆ ಉತ್ತೇಜನ ನೀಡುವ ಸಲುವಾಗಿ ಮಾಸಿಕ ರೂ.10,000 ಕೋವಿಡ್ ರಿಸ್ಕ್ ಪ್ರೋತ್ಸಾಹ ಧನವನ್ನು ಮುಂದಿನ ಆರು ತಿಂಗಳಿಗೆ ಅಥವಾ ಮುಂದಿನ ಆದೇಶದವರೆಗೆ ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ತಿಳಿಸಿದ್ದಾರೆ.

SCROLL FOR NEXT