ರಾಜ್ಯ

ಕೊರೋನಾ ಎಫೆಕ್ಟ್: ಮತ್ತೆ ಬೆಂಗಳೂರು ಲಾಕ್'ಡೌನ್, ಬೇಸರದಲ್ಲಿ ಕೈಗಾರಿಕಾ ವಲಯಗಳು

Manjula VN

ಬೆಂಗಳೂರು: ಕೊರೋನಾ ಸಂಕಷ್ಟ ಪರಿಸ್ಥಿತಿಯ ಕಟ್ಟಕಡೆಯ ಲಾಕ್'ಡೌನ್ ಎಂದು ಬಿಂಬಿಸಲಾಗುತ್ತಿರುವ 7 ದಿನಗಳ ಅವಧಿಯ ಲಾಕ್ಡೌನ್'ಗೆ ಕ್ಷಣಗಣನೆ ಆರಂಭವಾಗಿದ್ದು, ಮಂಗಳವಾರ ರಾತ್ರಿ 8ರಿಂದ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಬಹುತೇಕ ಸ್ತಬ್ದವಾಗಲಿದೆ. ಮತ್ತೆ ಲಾಕ್ಡೌನ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಕೈಗಾರಿಕಾ ವಲಯಗಳು ಮಾಲೀಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಲಾಕ್ಡೌನ್ ಕುರಿತು ಎಫ್'ಕೆಸಿಸಿಐ ಅಧ್ಯಕ್ಷ ಸಿಆರ್.ಜನಾರ್ಧನ್ ಅವರು ಮಾತನಾಡಿ, ಲಾಕ್'ಡೌನ್ ಘೋಷಣೆ ಮಾಡುವುದಕ್ಕೂ ಮುನ್ನ ಸರ್ಕಾರ ನಮ್ಮ ಪ್ರತಿಕ್ರಿಯೆಯನ್ನೇ ಕೇಳಿಲ್ಲ. ಸೋಂಕು ಪ್ರಕರಣಗಳು ಹೆಚ್ಚಾದರೆ, ಅದರ ಜವಾಬ್ದಾರಿ ತೆಗೆದುಕೊಳ್ಳಲು ನಾವು ಸಿದ್ಧರಿದ್ದೇವೆ. ಲಾಕ್'ಡೌನ್ ಘೋಷಣೆ ಮಾಡಲು ನಾವು ಸಿದ್ಧರಿದ್ದೇವೆ. ಆದರೆ, ಸರ್ಕಾರ ನಮ್ಮ ಪ್ರತಿಕ್ರಿಯೆ ಕೇಳದೆ ಲಾಕ್'ಡೌನ್ ಘೋಷಣೆ ಮಾಡಿರುವುದು ಸರಿಯಲ್ಲ. ಈ ಹಿಂದೆ ಮಾಡಲಾಗಿದ್ದ 54 ದಿನಗಳ ಲಾಕ್ಡೌನ್ ಭಾರೀ ಆರ್ಥಿಕ ನಷ್ಟವನ್ನು ಎದುರು ಮಾಡಿದೆ. ಮುಂದೆ ಮತ್ತೆ ಲಾಕ್ಡೌನ್ ಮಾಡುವುದಿಲ್ಲ ಎಂದು ಸರ್ಕಾರ ಈ ಹಿಂದೆ ಭರವಸೆ ನೀಡಿತ್ತು. ಆದರೆ, ಇದೀಗ ಮತ್ತೆ ಲಾಕ್ಡೌನ್ ಘೋಷಣೆ ಮಾಡಿದೆ ಎಂದು ಬೇಸರ ವ್ಯಕ್ತಪಜಿಸಿದ್ದಾರೆ. 

ಪೀಣ್ಯ ಕೈಗಾರಿಕಾ ವಲಯದ ಸದಸ್ಯರು ಮಾತನಾಡಿ, ಕೈಗಾರಿಕಾ ವಲಯವು ಒಟ್ಟು ರಾಜ್ಯ ದೇಶೀಯ ಉತ್ಪನ್ನಕ್ಕೆ ಶೇಕಡಾ 26 ರಷ್ಟು ಕೊಡುಗೆ ನೀಡುತ್ತಿದ್ದು, ಬೆಂಗಳೂರು ಒಂದೇ ಜಿಎಸ್‌ಡಿಪಿಗೆ ಶೇ 70 ರಷ್ಟು ಕೊಡುಗೆ ನೀಡುತ್ತದೆ. ಈಗಾಗಲೇ ಸಾಕಷ್ಟು ಆರ್ಡರ್ ಗಳನ್ನು ನಾವು ತೆಗೆದುಕೊಂಡಿದ್ದೇವೆ. ಸಮಯಕ್ಕೆ ಸರಿಯಾಗಿ ಆ ಕಾರ್ಯಗಳು ಪೂರ್ಣಗೊಳ್ಳದೇ ಹೋದರೆ, ಹೂಡಿಕೆದಾರರು ಬೇರೆ ರಾಜ್ಯಗಳತ್ತ ಮುಖ ಮಾಡುತ್ತಾರೆ. ಮಹಾರಾಷ್ಟ್ರ ಇಲ್ಲವೇ ತಮಿಳುನಾಡು ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಲಾಕ್ಡೌನ್ ನಿಂದ ಕೈಗಾರಿಕಾ ವಲಯಗಳಿಗೆ ವಿನಾಯಿತಿ ನೀಡಬೇಕು ಎಂದು ಹೇಳಿದ್ದಾರೆ. 

ರೇಷ್ಮೆ ಹಾಗೂ ಆಭರಣ ಉದ್ಯಮಗಳ ಸಂಘಗಳ ಸದಸ್ಯರು ಮಾತನಾಡಿ, ಹಬ್ಬಗಳ ಸೀಸನ್ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಲಾಕ್ಡೌನ್ ಮಾಡುವುದರಿಂದ ನೌಕರರು ನಿರುದ್ಯೋಗದಲ್ಲಿ ನರಳುವಂತಾಗುತ್ತದೆ ಎಂದು ತಿಳಿಸಿದ್ದಾರೆ. 

ಇನ್ನು ಹೋಟೆಲ್ ಸಂಘಟನೆಗಳ ಸದಸ್ಯರು ಮಾತನಾಡಿ, ಸರ್ಕಾರಕ್ಕೆ 3,000 ಹೋಟೆಲ್ ಗಳ ರೂಮ್ ಗಳ ಅಗತ್ಯವಿದೆ. ಸಾಂಸ್ಥಿಕ ಕ್ವಾರಂಟೈನ್ ನಲ್ಲಿರುವವರಿಗೆ ಸೂಕ್ತ ರೀತಿಯ ಆಹಾರಗಳನ್ನು ನೀಡಬೇಕು. ಲಾಕ್ಡೌನ್ ನಿಂದ ಹೋಟೆಲ್ ವಲಯಗಳ ಮೇಲೆ ಪರಿಣಾಮ ಬೀರಿದರೆ. ನಮ್ಮ ಕಾರ್ಯಗಳು ಸುಗಮವಾಗಿ ಸಾಗುವುದಾದರೂ ಹೇಗೆ? ಎಂದು ಪ್ರಶ್ನಿಸಿದ್ದಾರೆ. 

SCROLL FOR NEXT