ರಾಜ್ಯ

ಲಾಕ್ ಆಗಿದ್ದ ಕೊರೋನಾ ರೋಗಿಯ ಮನೆಯಲ್ಲಿ ಕಳ್ಳರ ದರ್ಬಾರ್, ನಗ-ನಾಣ್ಯ ಲೂಟಿ

Srinivasamurthy VN

ತುಮಕೂರು: ಕೊರೋನಾ ಸೋಂಕಿತೆಯ ಲಾಕ್ ಆಗಿದ್ದ ಮನೆ ಮೇಲೆ ದಾಳಿ ಮಾಡಿದ ಕಳ್ಳರು ಲಕ್ಷಾಂತರ ರೂ ಮೌಲ್ಯದ ನಗ-ನಾಣ್ಯ ಲೂಟಿ ಮಾಡಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೆಜಿ ಟೆಂಪಲ್ ನಲ್ಲಿ ಈ ಘಟನೆ ನಡೆದಿದ್ದು, ಜುಲೈ ಮೊದಲ ವಾರದಲ್ಲಿ ಹೆರಿಗೆ ನಿಮಿತ್ತ  ಚಿಕ್ಕಮಗಳೂರಿನಿಂದ ಜಿಲ್ಲೆಗೆ ಆಗಮಿಸಿದ್ದ ಗರ್ಭಿಣಿ ಮಹಿಳೆಗೆ ಸೋಂಕು ದೃಢವಾಗಿತ್ತು, ಹೀಗಾಗಿ ಅವರನ್ನು ಆಸ್ಪತ್ರೆಗೆ ದಾೃಖಲಿಸಿ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ತಾಯಿ ಮತ್ತು ಇತರೆ ಕುಟುಂಬಸ್ಥರನ್ನು ಕ್ವಾರಂಟೈನ್ ಮಾಡಲಾಗಿತ್ತು. ಹೀಗಾಗಿ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿ ಮನೆಯಿದ್ದ ರಸ್ತೆಯನ್ನು ಕಂಟೈನ್ ಮೆಂಟ್ ಝೋನ್ ಎಂದು ಕ್ಲೋಸ್ ಮಾಡಿದ್ದರು.

ಬಳಿಕ ಸೋಂಕಿತ ಗರ್ಭಿಣಿಯ ತಾಯಿ ತಮ್ಮ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ, ತಮ್ಮ ಕೋವಿಡ್ ಟೆಸ್ಟ್ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಮನೆಗೆ ಮರಳಿದ್ದಾರೆ. ವರದಿ ನೆಗೆಟಿವ್ ಬಂದ ಖುಷಿಯಲ್ಲೇ ಮನೆಗೆ ಮರಳಿದ್ದ ತಾಯಿಗೆ ಮನೆ ಬಾಗಿಲು ತೆರೆಯುತ್ತಿದ್ದಂತೆಯೇ ಶಾಕ್ ಕಾದಿತ್ತು. ಮನೆಯಲ್ಲಿ ಕಳ್ಳತನ ನಡೆದ ವಿಚಾರ ತಿಳಿದು ಆಘಾತಕ್ಕೊಳಗಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವಿಚಾರ ತಿಳಿದ ಕಳ್ಳರು ಮನೆಯಲ್ಲಿ ಕಳ್ಳತನವೆಸಗಿದ್ದಾರೆ. 

ಮನೆಯಲ್ಲಿದ್ದ 80 ಸಾವಿರ ರೂ. ನಗದು ಮತ್ತು 2 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ಕಳ್ಳರು ಹೊತ್ತಿಯ್ದಿದ್ದಾರೆ.  ಮನೆ ಮುಂದೆ ಹಾಕಿದ್ದ ಬ್ಯಾರಿಕೇಡ್ ಗಳನ್ನು ದಾಟಿ ಬಂದ ಕಳ್ಳರು ಹಿಂದಿನ ಬಾಗಿಲು ಒಡೆದು ಮನೆಯೊಳಗೆ ನುಗ್ಗಿದ್ದಾರೆ. ಪ್ರಸ್ತುತ ಸಂತ್ರಸ್ಥ ಮಹಿಳೆ ಕಳ್ಳತನ ಸಂಬಂಧ ಚಂದ್ರಶೇಖರ ಪುರ ಪೊಲೀಸರು ಘಟನಾ ಪ್ರದೇಶವನ್ನು ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇದೇ ವಿಚಾರವಾಗಿ ಮಾತನಾಡಿರುವ ಪೊಲೀಸರೊಬ್ಬರು ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಕಳ್ಳರು ಸೋಂಕಿತೆಯ ಮನೆಯನ್ನೇ ದೋಚಿದ್ದಾರೆ. ಹೀಗಾಗಿ ಅವರಿಗೂ ಸೋಂಕು ಹರಡಿರುವ ಸಾಧ್ಯತೆ. ಆದರೂ ಪ್ರಕರಣಗಳು ದಾಖಲಿಸಿಕೊಂಡು ತನಿಖೆ ನಡೆಸಿದ್ದೇವೆ ಎಂದು  ಹೇಳಿದ್ದಾರೆ.

SCROLL FOR NEXT