ರಾಜ್ಯ

ನನಗೆ ಸೋಂಕಿದೆ, ಮಗನಿಗೆ ಜ್ವರವಿದೆ: ಯಡಿಯೂರಪ್ಪ ಮನೆ ಮುಂದೆ ಬೆಡ್ ಕೊಡಿಸಿ ಎಂದು ಕೊರೋನಾ ರೋಗಿಯ ರಂಪಾಟ

Shilpa D

ಬೆಂಗಳೂರು: ನನಗೆ ಕೊರೋನಾ ಸೋಂಕಿದೆ, ಮಗನಿಗೆ ಜ್ವರವಿದೆ, ನನ್ನ ಇಡೀ ಕುಟುಂಬಕ್ಕೆ ಸೋಂಕು ತಗುಲಿದರೇ ಏನು ಮಾಡುವುದು ಎಂದು ನಗರದ ನಿವಾಸಿಯೊಬ್ಬ ಸಿಎಂ ಯಡಿಯೂರಪ್ಪ ಮನೆ ಮುಂದೆ ಗುರುವಾರ ಕೆಲ ಕಾಲ ಗೋಳಾಟ ನಡೆಸಿದ ಕರುಣಾಜನಕ ಘಟನೆ ನಡೆದಿದೆ.

ಚಿಕಿತ್ಸೆ ಸಲುವಾಗಿ ಹಲವು ಆಸ್ಪತ್ರೆಗಳಿಗೆ ಅಲೆದರೂ ಹಾಸಿಗೆ ಸಿಗದೆ ಹತಾಶೆಗೊಂಡ ಕರೋನಾ ಸೋಂಕಿತರೊಬ್ಬರು ಪತ್ನಿ  ಹಾಗೂ ಎರಡು ಪುಟ್ಟಮಕ್ಕಳ ಸಹಿತ ತಮ್ಮ ಕುಟುಂಬ ಸಮೇತ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಬಳಿ ಆಗಮಿಸಿ ಚಿಕಿತ್ಸೆ ಕೊಡಿಸುವಂತೆ ಅಂಗಲಾಚಿದ್ದಾರೆ.

‘ಹಾಸಿಗೆ ಕೊರತೆಯಿಲ್ಲ’ ಎಂದು ಹೇಳುವ ಸರ್ಕಾರಕ್ಕೆ ಪರಿಸ್ಥಿತಿಯ ನೈಜ ದರ್ಶನವಾಗಿದೆ. ಮೇಲಾಗಿ ಯಡಿಯೂರಪ್ಪ ಅವರ ಮನೆಯ ಮುಂದೆಯೇ ಈ ಘಟನೆ ನಡೆದಿರುವುದು  ಮುಖ್ಯಮಂತ್ರಿಗಳ ಆರೋಗ್ಯ ಹಾಗೂ ಅವರ ಭದ್ರತೆಗೆ ಸವಾಲಾಗುವಂಥದ್ದಾಗಿದೆ. ಬನಶಂಕರಿ ಸಮೀಪದ ಡಾ.ಬಿ.ಆರ್‌.ಅಂಬೇಡ್ಕರ್‌ ನಗರದ ನಿವಾಸಿಗೆ ಕೊರೋನಾ ಸೋಂಕು
ತಗುಲಿತ್ತು. 3 ದಿನಗಳಿಂದ ಚಿಕಿತ್ಸೆಗಾಗಿ ಆತ ಹಲವು ಆಸ್ಪತ್ರೆಗಳಿಗೆ ಎಡ ತಾಕಿದರೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತ ಸೋಂಕಿತ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ತನ್ನ ಕುಟುಂಬ ಸಮೇತ ಬಂದಿದ್ದ. ಆಗ ಮುಖ್ಯಮಂತ್ರಿಗಳ ಮನೆ ಗೇಟಿನ ದ್ವಾರದಲ್ಲೇ ಸೋಂಕಿತನನ್ನು ತಡೆದ ಪೊಲೀಸರು ಅಂತಿಮವಾಗಿ ಕೆ.ಸಿ.ಜನರಲ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಆದರೆ ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಆಪ್ತರೊಬ್ಬರು, ಸೋಂಕಿತ ವ್ಯಕ್ತಿ ಯಾವುದೇ ಆಸ್ಪತ್ರೆಗೂ ಹೋಗಿರಲಿಲ್ಲ, ಯಾವ ಆಸ್ಪತ್ರೆಯೂ ಚಿಕಿತ್ಸೆಗೆ ನಿರಾಕರಿಸಿಲ್ಲ, ಸೋಂಕಿತ
ವ್ಯಕ್ತಿ ನೇರವಾಗಿ ಸಿಎಂ ಮನೆ ಬಳಿ ಬಂದಿದ್ದ ಎಂದು     ಹೇಳಿದ್ದಾರೆ. ಆ ವ್ಯಕ್ತಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿಸಿದ್ದಾರೆ.

SCROLL FOR NEXT