ರಾಜ್ಯ

ಕೊಪ್ಪಳ ಮೆಡಿಕಲ್ ಕಾಲೇಜಿಗೆ ಸಚಿವ ಕೆ. ಸುಧಾಕರ ಮೆಚ್ಚುಗೆ; ಕೊರತೆಗಳ ನಡುವೆಯೂ ನಿತ್ಯ ಸಾವಿರ ಕೋವಿಡ್ ಟೆಸ್ಟ್

Srinivasamurthy VN

ಗಂಗಾವತಿ: ಸಾಕಷ್ಟು ಕುಂದುಕೊರತೆ, ಅಗತ್ಯ ಸೌಲಭ್ಯಗಳ ಕೊರತೆಗಳ ಹೊರತಾಗಿಯೂ ಇಡೀ ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಈಗ ನಿತ್ಯ ಸಾವಿರ ಗಂಟಲು ಪರೀಕ್ಷೆ (ಕೋವಿಡ್ ಟೆಸ್ಟ್) ನಡೆಯುತ್ತಿವೆ. 

ಈ ಬಗ್ಗೆ ಸ್ವತಃ ಉನ್ನತ ವೈದ್ಯಕೀಯ ಶಿಕ್ಷಣ ಖಾತೆಯ ರಾಜ್ಯ ಸಚಿವ ಕೆ. ಸುಧಾಕರ್ ಟ್ವಿಟ್ ಮಾಡಿ ಕೊಪ್ಪಳ ಮೆಡಿಕಲ್ ಕಾಲೇಜಿನ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೋಂಕು ಹರಡಲು ಆರಂಭವಾದಾಗಿನಿಂದಲೂ ಕೊಪ್ಪಳದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಉತ್ತಮ ಕ್ರಮಗಳನ್ನು ಕೈಗೊಳ್ಳಲಾಗುತ್ತಿರುವುದು ಸಚಿವರ ಪ್ರಶಂಸೆಗೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ನೇತೃತ್ವದಲ್ಲಿ ನಾನಾ ಇಲಾಖೆಯ ಅಧಿಕಾರಗಳು ಶ್ರಮಿಸುತ್ತಿರುವ ಹಿನ್ನೆಲೆ ರಾಜ್ಯದ ಕೆಲ ಐಎಎಸ್ ಅಧಿಕಾರಿಗಳ ಶ್ಲಾಘನೆಯ ಹಿನ್ನೆಲೆ ಸಚಿವ ಸುಧಾಕರ್, ಕೊಪ್ಪಳದ ಮೆಡಿಕಲ್ ಕಾಲೇಜಿನ ಬಗ್ಗೆ ಟ್ವಿಟ್ ಮಾಡಿದ್ದಾರೆ.

'ಕೊಪ್ಪಳದ ಮೆಡಿಕಲ್ ಕಾಲೇಜು ಕೆಲ ಕುಂದುಕೊರತೆಗಳ ಹೊರತಾಗಿಯೂ ದಿನಕ್ಕೆ 1000 (ಒಂದು ಸಾವಿರ) ಕೋವಿಡ್ ಪರೀಕ್ಷೆಗಳನ್ನು ನಡೆಸುತ್ತಿದೆ. ಈ ಅನುಕರಣಿಯ ಸಾಧನೆ ಹಿಂದಿರುವ ಎಲ್ಲಾ ಸಿಬ್ಬಂದಿಗಳಿಗೂ ನನ್ನ ಅಭಿನಂದನೆಗಳು. ನೆರೆಯ ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿಯೂ ಇದೇ ರೀತಿ ಪರೀಕ್ಷಾ ಸಾಮಥ್ರ್ಯ ಹೆಚ್ಚಿಸಲು ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದ್ದೇನೆ' ಎಂದು ಸಚಿವ ಕೆ. ಸುಧಾಕರ ತಮ್ಮ ಖಾತೆಯ ಮೂಲಕ ಟ್ವಿಟ್ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸರಿಯಾಗಿ ಕೋವಿಡ್ ಟೆಸ್ಟ್ ನಡೆಯುತ್ತಿಲ್ಲ. ನೆಗೆಟಿವ್ ಇರುವ ಜನರನ್ನು ವಿನಾಕಾರಣಕ್ಕೆ ಅಧಿಕಾರಿಗಳು ಕರೆದೊಯ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ ಎಂಬ ಸಾರ್ವಜನಿಕ ಆರೋಪಗಳ ಮಧ್ಯೆ ಇದೀಗ ಸಚಿವರ ಈ ಟ್ವಿಟ್ ವೈದ್ಯಕೀಯ ಸಿಬ್ಬಂದಿಗಳಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ.

ವರದಿ: ಎಂ.ಜೆ. ಶ್ರೀನಿವಾಸ್

SCROLL FOR NEXT