ರಾಜ್ಯ

ರಾಜ್ಯದಲ್ಲಿ ಕೊರೋನಾ ಹೀಗೆಯೇ ಮುಂದುವರೆದರೆ ಎದುರಾಗಲಿದೆ ಭಾರೀ ಸಂಕಷ್ಟ: ತಜ್ಞರ ಎಚ್ಚರಿಕೆ

Manjula VN

ಬೆಂಗಳೂರು: ರಾಜ್ಯದಲ್ಲಿ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಕೊರೋನಾ ರಣಕೇಕೆ ಹೀಗೆಯೇ ಮುಂದುವರೆದಿದ್ದೇ ಆದರೆ, ಭಾರೀ ಸಂಕಷ್ಟಕ್ಕೆ ಸಿಲುಕಲಿದ್ದೇವೆಂದು ತಜ್ಞರು ಎಚ್ಚರಿಸಿದ್ದಾರೆ. 

ಕೊರೋನಾ ಸೋಂಕು ಪ್ರತೀನಿತ್ಯ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಹಾಸಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳ ಕೊರತೆ ಹೆಚ್ಚಾಗಲಿದೆ. ಇದರಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ. 

ಈಗಾಗಲೇ ರಾಜ್ಯದಲ್ಲಿ ಹಾಸಿಗೆ ಹಾಗೂ ಆರೋಗ್ಯ ಸಿಬ್ಬಂದಿಗಳ ಕೊರತೆ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ ಈ ವರೆಗೂ ಸೋಂಕಿತರ ಸಂಖ್ಯೆ 55,115ಕ್ಕೆ ತಲುಪಿದ್ದು, ಇದರಲ್ಲಿ 33,205 ಮಂದಿಯಲ್ಲಿ ವೈರಸ್ ಸಕ್ರಿಯವಾಗಿದೆ. ಬೆಂಗಳೂರು ನಗರ ಒಂದರಲ್ಲಿಯೇ 27,496 ಮಂದಿ ಸೋಂಕಿಗೊಳಗಾಗಿದ್ದು, 20,623 ಸೋಂಕಿನಿಂದ ಬಳಲುತ್ತಿದ್ದಾರೆ. ಜುಲೈ.17ರವರೆಗೂ ಬಿಬಿಎಂಪಿ ರಿಯಲ್ ಟೈಮ್ ಡ್ಯಾಷ್ ಬೋರ್ಡ್ ನಲ್ಲಿ ಹಾಸಿಗೆಗಳ ಲಭ್ಯತೆಯು, 396 ಸರ್ಕಾರಿ ಆಸ್ಪತ್ರೆಗಳಲ್ಲಿ, 58 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ,  4,585 ಖಾಸಗಿ ಆಸ್ಪತ್ರೆಗಳಲ್ಲಿ, 924 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಮತ್ತು 239 ಕೋವಿಡ್ ಕೇರ್ ಕೇಂದ್ರಗಳಲ್ಲಿ ಲಭ್ಯವಿದೆ ಎಂದು ತಿಳಿಸಲಾಗಿದೆ. 

ಈಗಾಗಲೇ 1,700 ಆಯುಷ್ ವೈದ್ಯರು, 42,000 ಆಶಾ ಕಾರ್ಯಕರ್ತೆಯರು ಸೇವೆ ಸಲ್ಲಿಸುವುದನ್ನು ನಿಲ್ಲಿಸಿದ್ದಾರೆ. ಇದರಿಂದ ರಾಜ್ಯದಲ್ಲಿ ಆರೋಗ್ಯ ಸಿಬ್ಬಂದಿಗಳ ಕೊರತೆ ಈಗಾಗಲೇ ಎದುರಾಗಿದೆ ಎಂದು ವೈದ್ಯ ಸತ್ಯನಾರಾಯಣ ಮೈಸೂರು ಅವರು ಹೇಳಿದ್ದಾರೆ. 

ಇನ್ನು 10 ದಿನಗಳಲ್ಲಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2 ಲಕ್ಷಕ್ಕೆ ಏರಿಕೆಯಾಗಿದ್ದೇ ಆದರೆ, ನಮ್ಮಲ್ಲಿ ಖಂಡಿತವಾಗಿಯೂ ಹಾಸಿಗೆಗಳೇ ಇರುವುದಿಲ್ಲ. ಇನ್ನೆರಡು ತಿಂಗಳವರೆಗೂ ಇದೇ ರೀತಿಯ ಪರಿಸ್ಥಿತಿ ಇದ್ದಿದ್ದೇ ಆದರೆ, ರೋಗಿಗಳಿಗೆ ಹಾಸಿಗೆಗಳಿರುತ್ತವೆ. ಬೆಗಳೂರು ನಗರದಲ್ಲಿ ಪ್ರತೀನಿತ್ಯ 800 ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಿದರಲ್ಲಿ 60 ಮಂದಿಗೆ ಐಸಿಯು ವ್ಯವಸ್ಥೆ ಅಗತ್ಯ ಬೀಳುತ್ತಿದೆ. ಎಲ್ಲರಿಗೂ ಐಸಿಯು ಹಾಸಿಗೆಗಳನ್ನು ನೀಡಲು ಕಷ್ಟಕರವಾಗುತ್ತದೆ ಎಂದು ತಿಳಿಸಿದ್ದಾರೆ. 

ರಾಜ್ಯದಲ್ಲಿ ಈಗಾಗಲೇ ಶೇ.20-30 ಮಂದಿ ಆರೋಗ್ಯ ಸಿಬ್ಬಂದಿಗಳು ಸೋಂಕಿಗೊಳಗಾಗುತ್ತಿದ್ದಾರೆ. ಇದು ಆತಂಕದ ವಿಚಾರವಾಗಿದೆ. ಸೋಂಕಿನಿಂದ ಗುಣಮುಖರಾದರೂ ಕೂಡ ಮತ್ತೆ ಅವರು ಕೆಲಸಕ್ಕೆ ಹಾಜರಾಗಲು ಹಿಂದೇಟು ಹಾಕುತ್ತಾರೆ. ಈ ಎಲ್ಲಾ ಬೆಳವಣಿಗೆಗಳು ಕೊರೋನಾ ನಿರ್ವಹಣೆಗೆ ನಿಂತಿರುವ ನಮ್ಮ ಹೋರಾಟಕ್ಕೆ ಹಿನ್ನಡೆಯುಂಟು ಮಾಡುತ್ತೆವೆ ಎಂದಿದ್ದಾರೆ. 

ಪ್ರಸ್ತುತ ಖಾಸಗಿ ಆಸ್ಪತ್ರೆಗಳ ಶೇ.50ರಷ್ಟು ಹಾಸಿಗೆಗಳನ್ನು ಸೋಂಕಿತರಿಗಾಗಿ ಮೀಸಲಿಡಲಾಗಿದೆ. ಬೆಗಳೂರಿನಲ್ಲಿಯೇ ಪ್ರತೀನಿತ್ಯ ಸೋಂಕಿತರ ಸಂಖ್ಯೆ 2,000ಕ್ಕೆ ಏರಿಕೆಯಾಗುತ್ತಿದೆ. ಈ ಸಂಖ್ಯೆ 5,000ಕ್ಕೆ ಏರಿಕೆಯಾಗಿದ್ದೇ ಆದರೆ, ಹಾಸಿಗೆಗಳ ಕೊರತೆ ಎದುರಾಗಲಿದೆ ಎಂದು ಡಾ.ಪ್ರಸನ್ನ ಹೇಳಿದ್ದಾರೆ. 

SCROLL FOR NEXT