ರಾಜ್ಯ

ಬೆಳಗಾವಿ:ಬಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ, ಕೋವಿಡ್-19 ರೋಗಿಗಳ ಪರಿಸ್ಥಿತಿ ಕರುಣಾಜನಕ!

Sumana Upadhyaya

ಬೆಳಗಾವಿ: ಸರ್ಕಾರಿ ಆಸ್ಪತ್ರೆಗಳ ಕೋವಿಡ್-19 ವಾರ್ಡ್ ಗಳಲ್ಲಿನ ದುರವಸ್ಥೆ ರೋಗಿಗಳನ್ನು ಇನ್ನಷ್ಟು ನರಕಕ್ಕೆ ತಳ್ಳಿದೆ.
ಸಾಧ್ಯವಾದಷ್ಟು ಬೇಗ ಈ ವಾರ್ಡ್ ನಿಂದ ಹೊರಹೋದರೆ ಸಾಕಪ್ಪಾ ಎನ್ನುವ ಮನಸ್ಥಿತಿಯಲ್ಲಿ ರೋಗಿಗಳಿದ್ದಾರೆ. ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಕೋವಿಡ್-19 ವಾರ್ಡ್ ನಲ್ಲಿ ಚಿಕಿತ್ಸೆಯ ಅವ್ಯವಸ್ಥೆ ಬಗ್ಗೆ ಸಾಕಷ್ಟು ಮೆಸೇಜ್ ಗಳು, ವಿಡಿಯೊಗಳು ಹರಿದಾಡುತ್ತಿದ್ದು ರೋಗಿಗಳನ್ನು ಮತ್ತು ಅವರ ಮನೆಯವರನ್ನು ಆತಂಕಕ್ಕೀಡುಮಾಡಿದೆ.

ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಬಿಮ್ಸ್ )ನಲ್ಲಿ ಕೋವಿಡ್-19ನಿಂದ ಬಳಲುತ್ತಿದ್ದ 65 ವರ್ಷದ ವೃದ್ಧರೊಬ್ಬರು ನೆಲದಲ್ಲಿ ನೋವಿನಿಂದ ಹೊರಳಾಡುತ್ತಾ ಅಸುನೀಗಿದ್ದು ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇದಾದ ಬಳಿಕ ಹಲವು ರೋಗಿಗಳು ತಮ್ಮನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮನೆಗೆ ಕಳುಹಿಸಿ ಎಂದು ಹೇಳುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಮನಮಿಡಿಯುವಂತಿದೆ.

ಕೋವಿಡ್-19 ರೋಗಿಗಳು ತಮಗೆ ತಾವೇ ಸಹಾಯಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ವಾರ ಒಬ್ಬ ಕೋವಿಡ್ ರೋಗಿ ಇಲ್ಲಿಗೆ ದಾಖಲಾಗಿದ್ದರು. ಕೋವಿಡ್ ಅಲ್ಲದ ಅವರ ಪತ್ನಿಯೇ ಅವರ ಸಹಾಯಕರಾಗಿ ಆಸ್ಪತ್ರೆಯಲ್ಲಿ ನಿಲ್ಲಬೇಕಾಯಿತು. ನಂತರ ಅವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದರು. ಇದೀಗ ಪತ್ನಿಯ ಕೋವಿಡ್-19 ಪರೀಕ್ಷೆ ಮಾಡಿಸಿದ್ದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ತೀರಿಹೋದ ತಮ್ಮ ಪತಿಯ ಪರಿಸ್ಥಿತಿ ಕೊನೆಯವರೆಗೂ ಚಿಂತಾಜನಕವಾಗಿತ್ತು ಎನ್ನುತ್ತಾರೆ ಮಹಿಳೆ.

ನಿನ್ನೆ ಅಥಣಿಯ ಯುವಕರೊಬ್ಬರು ಟ್ವೀಟ್ ಮಾಡಿ, ನಾನು ನಿನ್ನೆ ಈ ಆಸ್ಪತ್ರೆಗೆ ದಾಖಲಾದೆ. ಕೋವಿಡ್-19 ವಾರ್ಡ್ ನ ಅವ್ಯವಸ್ಥೆ, ಅಶುಚಿತ್ವ ಕಂಡು ಬೇರೆ ರೋಗ ಕೂಡ ಬರಬಹುದು ಎಂಬ ಆತಂಕ ನನಗೆ ಕಾಡುತ್ತಿದೆ. ನನ್ನನ್ನು ದಯವಿಟ್ಟು ಅಥಣಿಗೆ ವರ್ಗಾಯಿಸಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬಿಮ್ಸ್ ನಿರ್ದೇಶಕ ವಿನಯ್ ದಸ್ತಿಕೊಪ್, ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನಮ್ಮಲ್ಲಿ ಸಾಕಷ್ಟು ಸಿಬ್ಬಂದಿಯಿದ್ದಾರೆ. ತಮ್ಮ ಸಹಾಯಕರನ್ನೇ ಇರಿಸಿಕೊಳ್ಳಬೇಕೆಂದು ನಾವು ರೋಗಿಗಳಿಗೆ ಹೇಳಿಲ್ಲ ಎನ್ನುತ್ತಾರೆ.

ಸಹಾಯಕರು ರೋಗಿಗಳು ಮಕ್ಕಳಾಗಿದ್ದರೆ ಮಾತ್ರ ಬೇಕಾಗುತ್ತದೆ. ಕೊರೋನಾ ರೋಗಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತಿದೆ. ಕೋವಿಡ್-19 ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಕೋವಿಡ್ ಕೇರ್ ಕೇಂದ್ರಗಳನ್ನು ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗಿದೆ. ಗಂಭೀರ ಆರೋಗ್ಯ ಸಮಸ್ಯೆಯಿರುವ ಕೋವಿಡ್-19 ರೋಗಿಗಳನ್ನು ಮಾತ್ರ ಬಿಮ್ಸ್ ಗೆ ವರ್ಗಾಯಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹೀರೇಮಠ್ ಹೇಳಿದ್ದಾರೆ.

SCROLL FOR NEXT