ರಾಜ್ಯ

ಕಲಬುರಗಿ: ವೆಂಟಿಲೇಟರ್ ಸಿಗದೆ ಅಂಗನವಾಡಿ ಕಾರ್ಯಕರ್ತೆ ಸಾವು

Lingaraj Badiger

ಕಲಬುರಗಿ: ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೋರ್ವರು ಹೈದ್ರಾಬಾದ್ ಗೆ‌ ಕರೆದ್ಯೊಯ್ಯುವ ಮಾರ್ಗದಲ್ಲಿ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದ ಅಕ್ಕನಾಗಮ್ಮ ದಯಾಮಣಿ(50) ಮೃತ ದುರ್ದೈವಿ. ಸೋಮವಾರ ರಾತ್ರಿ 2 ಗಂಟೆ ಸುಮಾರಿಗೆ ಅಕ್ಕನಾಗಮ್ಮ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ತಕ್ಷಣವೇ ಕುಟುಂಬಸ್ಥರು ‌ಅವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಕರೆತಂದರಾದರೂ ಅವರನ್ನು ದಾಖಲಿಸಿಕೊಳ್ಳಲಿಲ್ಲ. ನಂತರ ಇಎಸ್ಐಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೆಂಟಿಲೇಟರ್ ಇಲ್ಲ ಎಂಬ ನೆಪ ಒಡ್ಡಿ ವೈದ್ಯರು ಚಿಕಿತ್ಸೆಗೆ ನಿರಾಕರಿಸಿದರು ಎಂಬ ಆರೋಪ ಕೇಳಿಬಂದಿದೆ.

ಜಿಮ್ಸ್, ಇಎಸ್ ಐ ಸೇರಿ ನಂತರ ಅವರನ್ನು ನಗರದ ಎರಡು ಪ್ರಮುಖ ‌ಖಾಸಗಿ ಆಸ್ಪತ್ರೆಗಳಿಗೆ ಕರೆದ್ಯೊಯ್ದರು ದಾಖಲಿಸಿಕೊಳ್ಳಲಿಲ್ಲ. ಹೀಗಾಗಿ ವಿಧಿ ಇಲ್ಲದೇ ಅವರನ್ನು ಆ್ಯಂಬುಲೆನ್ಸ್ ಮೂಲಕ ಹೈದ್ರಾಬಾದ್ ಗೆ ಕೊಂಡೊಯ್ಯುವಾಗ ‌ಮಾರ್ಗಮಧ್ಯೆ ಜಹೀರಾಬಾದ್ ಬಳಿ ಕೊನೆಯುಸಿರೆಳೆದರು ‌ಎಂದು ಮೃತರ ಪತಿ ಛತ್ರಪತಿ ಅವರು ಆರೋಪಿಸಿದ್ದಾರೆ.

ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಗರದ ಹಲವು ‌ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸುತ್ತಿವೆ. ಅಂಗನವಾಡಿ ‌ಕಾರ್ಯಕರ್ತೆಗೆ ಸರ್ಕಾರಿ ಆಸ್ಪತ್ರೆಯೇ‌ ಚಿಕಿತ್ಸೆ ‌ನಿರಾಕರಿಸಿದರೆ ಹೇಗೆ? ಎಂದು ಪ್ರಶ್ನಿಸಿದ ಅವರು, ಜಿಲ್ಲಾಧಿಕಾರಿಗಳು ಶೀಘ್ರವೇ ಆಸ್ಪತ್ರೆ ಮಂಡಳಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮಾರುತಿ ಮಾನ್ಪಡೆ ಒತ್ತಾಯಿಸಿದ್ದಾರೆ‌.

SCROLL FOR NEXT