ರಾಜ್ಯ

ಬಕ್ರೀದ್ ಗಾಗಿ ತಂದಿದ್ದ 8 ಒಂಟೆಗಳ ರಕ್ಷಣೆ; ರಾಜಸ್ತಾನ ಮೂಲದ 6 ಜನರ ಬಂಧನ

Srinivasamurthy VN

ಕಲಬುರ್ಗಿ: ಬಕ್ರೀದ್ ಹಬ್ಬಕ್ಕಾಗಿ ಬಲಿಕೊಡಲು ತಂದಿದ್ದ 8 ಒಂಟೆಗಳನ್ನು ಕಲಬುರ್ಗಿ ಜಿಲ್ಲೆಯಲ್ಲಿ ರಕ್ಷಣೆ ಮಾಡಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮೂಲದ 6 ಜನರನ್ನು ಬಂಧಿಸಲಾಗಿದೆ.

ಕಲಬುರ್ಗಿ ಜಿಲ್ಲೆ ಆಳಂದ ಠಾಣಾ ವ್ಯಾಪ್ತಿಯಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಆಳಂದ ಪಟ್ಟಣದ ಹಳೆ ಚೆಕ್ ಪೋಸ್ಟ್ ಬಳಿ ಪೊಲೀಸರು ಒಂಟೆಗಳನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ  ಒಂದೊಂದು ಒಂಟೆ 50 ಸಾವಿರ ರೂಪಾಯಿ ಬೆಲೆ ಬಾಳುತ್ತಿವೆ. ಒಟ್ಟು ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಎಂಟು ಒಂಟೆಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂತೆಯೇ ಒಂಟೆ ಸಾಗಿಸಿಕೊಂಡು ಬಂದ ಆರು ಜನರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮಧ್ಯ ಪ್ರದೇಶ ಮೂಲದ ಮನೋಜ್ ಶಿಂಧೆ, ಬಾಣೇಶ ಸೀತೋಳೆ, ಮನೋಜ್ ಜಾಧವ್, ನಿತೇಶ್ ಸಿಂಧೆ, ಗೋವಿಂದ್ ಸಿಂಧೆ ಹಾಗೂ ರಾಜೇಶ್ ಸಿಂಧೆ ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಮಧ್ಯ ಪ್ರದೇಶ ರಾಜ್ಯದ ಬಡಾವಣಿ ಜಿಲ್ಲೆಯ ಸೇನದವಾ ಗ್ರಾಮಕ್ಕೆ ಸೇರಿದವರೆನ್ನಲಾಗಿದೆ.

ಪ್ರಸ್ತುತ ವಶಕ್ಕೆ ಪಡೆಯಲಾಗಿದ ಎಲ್ಲ ಒಂಟೆಗಳನ್ನು ರಕ್ಷಿಸಿದ ಪೊಲೀಸರು ನಂದಿ ಅನಿಮಲ್ ವೆಲ್ಫೇರ್ ಸೊಸೈಟಿಯ ಗೋಶಾಲೆಗೆ ಕಳುಹಿಸಿಕೊಟ್ಟಿದ್ದಾರೆ. ಕಲಬುರ್ಗಿ ತಾಲೂಕಿನ ಕೆರಿ ಭೋಸಗಾ ಬಳಿ ಇರುವ ನಂದಿ ಗೋಶಾಲೆಯಲ್ಲಿ ಒಂಟೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಗೋವುಗಳ ಜೊತೆಗೆ ಒಂಟೆಗಳಿಗೂ ಆಹಾರ ನೀಡಿ, ಅವುಗಳ ಆರೈಕೆ ಮಾಡುವುದಾಗಿ ನಂದಿ ಅನಿಮಲ್ ವೆಲ್ ಫೇರ್ ಸೊಸೈಟಿ ಅಧ್ಯಕ್ಷ ಕೇಶವ ಮೋಟಗಿ ತಿಳಿಸಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

SCROLL FOR NEXT