ರಾಜ್ಯ

ಬೆಳಗಾವಿ ಆಸ್ಪತ್ರೆಯಲ್ಲಿ ದಾಂಧಲೆ ಪ್ರಕರಣ: ಎಂಟು ಮಂದಿ ಪೊಲೀಸ್‍ ವಶಕ್ಕೆ

Raghavendra Adiga

ಬೆಳಗಾವಿ: ಕೋವಿಡ್ -19 ಸೋಂಕಿತ ರೋಗಿಯ ಸಾವಿನ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಿ ಬಿಮ್ಸ್ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಜನರನ್ನು ವಶಕ್ಕೆ ಪಡೆದಿದ್ದಾರೆ.

ಜುಲೈ 19 ರಂದು ಉಸಿರಾಟದ ತೊಂದರೆಯಿಂದಾಗಿ ದಾಖಲಾಗಿದ್ದ 55 ವರ್ಷದ ವ್ಯಕ್ತಿ ಬುಧವಾರ ಸಾವನ್ನಪ್ಪಿದ್ದು, ಇದರಿಂದ ಆಕ್ರೋಶಗೊಂಡಿದ್ದ ಉದ್ರಿಕ್ತ ಗುಂಪು ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಿ, ಕಲ್ಲುಗಳನ್ನು ತೂರಿ ಆಸ್ಪತ್ರೆಯ ಕಿಟಕಿಗಳನ್ನು ಹಾನಿಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ಲಕ್ಷ್ಯದಿಂದಾಗಿಯೇ ರೋಗಿಯು ಸಾವನ್ನಪ್ಪಿದ್ದಾರೆ ಎಂದು ದೂರಿ ಜನರ ಗುಂಪು ಹಿಂಸಾಚಾರಕ್ಕೆ ಇಳಿದಿತ್ತು. 

ಎಪಿಎಂಸಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಮಧ್ಯೆ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಸಿಬ್ಬಂದಿ ಹಿಂಸಾಚಾರವನ್ನು ವಿರೋಧಿಸಿ ಮತ್ತು ರಕ್ಷಣೆ ಕೋರಿ ಗುರುವಾರ ಪ್ರತಿಭಟನೆ ನಡೆಸಿದರು.


ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್ ಮತ್ತು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಬಿಮ್ಸ್ ಗೆ ಭೇಟಿ ನೀಡಿ ಸಿಬ್ಬಂದಿಗೆ ಸಂಪೂರ್ಣ ರಕ್ಷಣೆ ನೀಡುವುದಾಗಿ ಪ್ರತಿಭಟನಾನಿರತರಿಗೆ ಭರವಸೆ ನೀಡಿದ್ದಾರೆ.

ಉದ್ವಿಗ್ನ ಪರಿಸ್ಥಿತಿಯ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಸೆಕ್ಷನ್ 144 ರ ಅಡಿಯಲ್ಲಿ ಜುಲೈ 31 ರವರೆಗೆ ನಿಷೇಧಾಜ್ಞೆಯನ್ನು ವಿಧಿಸಿದ್ದಾರೆ

SCROLL FOR NEXT