ರಾಜ್ಯ

ಬಕ್ರೀದ್ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರದ ತಡೆ, ಆಲಿಂಗನಕ್ಕೆ ನಿರ್ಬಂಧ

Lingaraj Badiger

ಬೆಂಗಳೂರು: ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಕ್ರೀದ್ ಹಬ್ಬದ ದಿನ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಸರ್ಕಾರ ಬ್ರೇಕ್ ಹಾಕಿದೆ.

ಮುಸ್ಲಿಂ ಬಾಂಧವರ ಎರಡನೇ ಪ್ರಮುಖ ಹಬ್ಬವಾದ ಬಕ್ರೀದ್ ಆಗಸ್ಟ್ 1ರಂದು ಆಚರಿಸಲಾಗುತ್ತಿದ್ದು, ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಜುಲೈ 31ರಂದು ಆಚರಿಸಲಾಗುತ್ತಿದೆ.

ಬಕ್ರೀದ್ ಹಬ್ಬದ ದಿನ ಸಾಮಾನ್ಯವಾಗಿ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಪರಿಪಾಟ ಇದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಈದ್ಗಾ ಅಥವಾ ಬಯಲು ಪ್ರದೇಶದಲ್ಲಿ ಸಾಮೂಹಿಕ ಪ್ರಾರ್ಥನೆ ಆಯೋಜನೆ ಮಾಡುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಸೀದಿಗಳಲ್ಲಿ ಬ್ಯಾಚ್ ಪ್ರಕಾರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದ್ದು, ಗರಿಷ್ಠ 50 ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಬಹುದು. ಅದೇ ರೀತಿ ಮಸೀದಿಗಳಲ್ಲಿ ಈದ್ ನಮಾಜ್ ಸಲ್ಲಿಸುವುದರಿಂದ ಯಾವುದೇ ಚ್ಯುತಿ ಬರುವುದಿಲ್ಲ ಎಂದು ಮುಸ್ಲಿಂ ಧಾರ್ಮಿಕ ಗುರುಗಳು ಸ್ಪಷ್ಟಪಡಿಸಿದ್ದಾರೆ.

ಪ್ರಾರ್ಥನಾ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ನಮಾಜ್ ಸಲ್ಲಿಸುವವರ ಮಧ್ಯ ಕನಿಷ್ಠ 6 ಅಡಿ ಅಂತರ ಕಾಯ್ದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಪ್ರಾರ್ಥನೆ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

SCROLL FOR NEXT