ರಾಜ್ಯ

ಕಾಂಗ್ರೆಸ್ ಕೊರೋನಾ ವಾರಿಯರ್ಸ್'ಗೆ ವಿಮೆ

Manjula VN

ಬೆಂಗಳೂರು: ಕೊರೋನಾ ನಿಯಂತ್ರಿಸಲು ಕಾಂಗ್ರೆಸ್ ಹಮ್ಮಿಕೊಂಡಿರುವ ಆರೋಗ್ಯ ಹಸ್ತೆ ಯೋಜನೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರಿಗೆ ವಿಮೆ ಮಾಡಿಸಲು ಕೆಪಿಸಿಸಿ ನಿರ್ಧರಿಸಿದೆ ಎಂದು ತಿಳಿದುಬಂದಿದೆ. 

ಜಿಲ್ಲಾ ಕಾಂಗ್ರೆಸ್, ಬ್ಲಾಕ್ ಕಾಂಗ್ರೆಸ್, ಶಾಸಕರು ಅಥವಾ 2018ರ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಕಾಂಗ್ರೆಸ್ ಕೊರೋನಾ ವಾರಿಯರ್ಸ್ ಪಟ್ಟಿ ತಯಾರಿಸಲು ಮತ್ತು ಈ ಸಂಬಂಧ ಕಾರ್ಯನಿರ್ವಹಿಸುವ ಸಲುವಾಗಿ ಶಾಸಕ ಅಜಯ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. 

ಕಾರ್ಯಕ್ರಮವನ್ನು ಜಾರಿಗೆ ತರುವ ಕುರಿತು ಡಿಕೆ.ಶಿವಕುಮಾರ್ ಅವರು ಶನಿವಾರ ಅಜಯ್ ಸಿಂಗ್ ಹಾಗೂ ಇತರೆ ನಾಯಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸಿದರು.

ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ಸರ್ಕಾರಕ್ಕೆ ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ನಮ್ಮ ಕೊರೋನಾ ಯೋಧರು ಜನರ ಆರೋಗ್ಯವನ್ನು ಪರೀಕ್ಷಿಸಲು ಥರ್ಮಲ್ ಸ್ಕ್ಯಾನರ್‌ಗಳು ಮತ್ತು ಪಲ್ಸ್ ಆಕ್ಸಿಮೀಟರ್‌ಗಳೊಂದಿಗೆ ಮನೆಗಳಿಗೆ ತೆರಳುತ್ತಾರೆ. ಆರೋಗ್ಯ ತಪಾಸಣೆ ಬಳಿಕ ಅಗತ್ಯವಿದ್ದರೆ, ಜನರನ್ನು ಆಸ್ಪತ್ರೆಗಳಿಗೆ ಕಳುಹಿಸುವ ಕೆಲಸ ಮಾಡುತ್ತಾರೆಂದು ಮಾಜಿ ಕೆಪಿಸಿಸಿ ಕಾರ್ಯದರ್ಶಿ ಮತ್ತು 20 ಮಂದಿಯ ಸಮಿತಿಯಲ್ಲೊಬ್ಬರಾಗಿರುವ ಎಂ.ರಾಮಲಿಂಗಯ್ಯ ಅವರು ಹೇಳಿದ್ದಾರೆ. 

ಪ್ರತಿ ಪಂಚಾಯತಿ ಹಾಗೂ ವಾರ್ಡ್‌ಗೆ ಇಬ್ಬರು ಕಾಂಗ್ರೆಸ್ ಕೊರೋನಾ ಯೋಧರನ್ನು ನಿಯೋಜಿಸಲಾಗುತ್ತದೆ. ಇವರೂ ಕೂಡ ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡುವ ಆಶಾ ಕಾರ್ಯಕರ್ತರಂತೆಯೇ ಕೆಲಸ ಮಾಡುತ್ತಾರೆ. ರಾಜ್ಯಾದ್ಯಂತ ಕೊರೋನಾ ವಾರಿಯರ್ಸ್ ರಂತೆ ಕೆಲಸ ಮಾಡುವ 15 ಸಾವಿರ ಯುವಕರನ್ನು ಈಗಾಗಲೇ ಪಕ್ಷ ಗುರುತಿಸಿದೆ ಎಂದು ತಿಳಿಸಿದ್ದಾರೆ. 

SCROLL FOR NEXT