ರಾಜ್ಯ

ಆಟೋ ಚಾಲಕರಿಗೆ, ವೈದ್ಯರಿಗೆ ಹಣ ಕೊಡ್ತೀರಿ: ವಿದ್ಯೆ ಕಲಿಸುವ ಶಿಕ್ಷಕರ ಮೇಲೇಕೆ ತಾತ್ಸಾರ?

Shilpa D

ಬೆಂಗಳೂರು: ನಾನು ಕಂಪ್ಯೂಟರ್ ಅಪ್ಲಿಕೇಷನ್ ಪದವೀದರ, ಬಹಳಷ್ಟು ಪರಿಶ್ರಮದ ನಂತರ ಶಾಲೆಯನ್ನು ನಿರ್ಮಿಸಿದ್ದೇನೆ, ಹಲವು ಮಹಿಳೆಯರಿಗೆ ಉದ್ಯೋಗ ನೀಡಿದ್ದೇನೆ, ನೂರಾರು ಮಂದಿಗೆ ಶಿಕ್ಷಣ ನೀಡಿದ್ದೇನೆ, ಹಲವು ನಿರಾಶ್ರಿತ ಮಹಿಳೆಯರಿಗೆ ಆಶ್ರಯ ನೀಡಿದ್ದೇನೆ, ಈಗ ನಾನೇ ಆಶ್ರಯ ಬಯಸುತ್ತಿದ್ದೇನೆ, ನನ್ನ ಪೋಷಕರಿಗಾಗಿ ನಾನೇಕೆ ಭಿಕ್ಷೆ ಬೇಡಬೇಕು? ಆಟೋ ಚಾಲಕರಿಗೆ ಹಣ ನೀಡುತ್ತೀರಿ, ವೈದ್ಯರನ್ನು ಹೊಗಳುತ್ತೀರಿ, ಆದರೆ ಅವರನ್ನೆಲ್ಲಾ ವಿದ್ಯಾವಂತರನ್ನಾಗಿಸುವ ಶಿಕ್ಷರು ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ, ಎಲ್ಲರಿಗಿಂತ ಮೊದಲು ನೀವು ಶಿಕ್ಷಕರನ್ನು ಪರಿಗಣಿಸಬೇಕು, ನಾವು ಸ್ವಾಭಿಮಾನದೊಂದಿಗೆ ಜೀವನ ನಡೆಸುತ್ತಿದ್ದೇವೆ ಈಗ ನಮ್ಮ ಜೀವನ ದುಸ್ತರವಾಗಿದೆ' ಹೀಗೆಂದು  ನೊಂದ ಶಾಲಾ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅವರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದಾರೆ.

ಇದೇ ರೀತಿಯ ಮತ್ತೊಂದು ಮೆಸೇಜ್ ಅನ್ನು ಖಾಸಗಿ ಶಾಲಾ ಶಿಕ್ಷಕಿಯೊಬ್ಬರು ಕಳುಹಿಸಿದ್ದಾರೆ.ನನಗೆ 11 ಸಾವಿರ ರು ತಿಂಗಳಿಗೆ ವೇತನ ಬರುತ್ತದೆ, ಇದರಲ್ಲಿ ನಾನು ಕುಟುಂಬದ ಆವರನ್ನು ಸಲಹಬೇಕಾಗುತ್ತದೆ. ಆದರೆ ಲಾಕ್ ಡೌನ್ ಆರಂಭವಾದಾಗಿನಿಂದ ನನ್ನ ವೇತನದಲ್ಲಿ 4 ಸಾವಿರ ರು ಗಳನ್ನು ಕಡಿತಗೊಳಿಸಲಾಗಿದೆ,  ಶಿಕ್ಷಕರ ವೇತನ ಕಡಿತಗೊಳಿಸಬಾರದೆಂದು ಸಚಿವರೇ ಆದೇಶ ನೀಡಿದ್ದರೂ ಶಾಲೆಗಳು ಕೇರ್ ಮಾಡುತ್ತಿಲ್ಲ, ಪೋಷಕರು ಶುಲ್ಕ ಪಾವತಿಸಲು ಮುಂದೆ ಬಂದಿಲ್ಲ ಎಂದು ಶಾಲಾ ಆಡಳಿತ ಮಂಡಳಿ
ತಿಳಿಸಿದೆ. ಹೀಗಾಗಿ ನಮಗೆ ವೇತನ ಸರಿಯಾಗಿ ನೀಡುತ್ತಿಲ್ಲ, ಆನ್ ಲೈನ್ ನಲ್ಲಿ ಮಕ್ಕಳು ಸರಿಯಾಗಿ ಕಲಿಯುತ್ತಿಲ್ಲ ಎಂದು ಶಿಕ್ಷಕರು ತಿಳಿಸಿದ್ದಾರೆ. ಇದು ಕೇವಲ ನನ್ನೊಬ್ಬಳ ಕಥೆಯಲ್ಲ ನನ್ನಂತ ಸಾವಿರ ಖಾಸಗಿ ಶಾಲಾ ಶಿಕ್ಷಕರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಪತ್ರ ಬರೆದು ಅನುದಾನ ರಹಿತ ಶಾಲೆಗಳ ಶಿಕ್ಷಕರ ಬಗ್ಗೆ ಗಮನ ಹರಿಸಬೇಕೆಂದು ಮನವಿ ಮಾಡಿದ್ದರು.ಯಲ್ಲಾಪುರದ ಶಿಕ್ಷಕರೊಬ್ಬರು ನದಿಗೆ  ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ಘಟನೆಯನ್ನು ಸರ್ಕಾರಕ್ಕೆ ವಿವರಿಸಿದ್ದರು. ಇಂತಹ ದುರಂತಗಳನ್ನು ತಡೆಯಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದರು.

ಶಿಕ್ಷಣ ಇಲಾಖೆಯು ಆರ್‌ಟಿಇ ಹಣವನ್ನು ವಿತರಿಸುವುದರ ಬಗ್ಗೆ ಬಸವರಾಜ ಹೊರಟ್ಟಿ. ಮರಿತಿಬ್ಬೇಗೌಡ ಮತ್ತು ಪುಟ್ಟಣ್ಣ  ಅಸಮಾಧಾನ ವ್ಯಕ್ತ ಪಡಿಸಿದ್ದರು. 2019-20ನೇ ಸಾಲಿನ ಮೊದಲ ಕಂತು 275 ಕೋಟಿ ರೂ.ಗಳನ್ನು ಕಂದಾಯ ಇಲಾಖೆ ಬಿಡುಗಡೆ ಮಾಡಿದ 45 ದಿನಗಳ ನಂತರವೂ ಶಾಲೆಗಳಿಗೆ ಹಣವನ್ನು ವರ್ಗಾಯಿಸಲು ಇಲಾಖೆ ವಿಫಲವಾಗಿದೆ ಎಂದು ಅವರು ಆರೋಪಿಸಿದ್ದಾರೆ.
 

SCROLL FOR NEXT