ರಾಜ್ಯ

ಮಳೆ ವಿಕೋಪದಿಂದ ರಕ್ಷಿಸಲು ಹಂಪಿ ಸ್ಮಾರಕಕ್ಕೆ 'ಪ್ರವಾಹ ನಿರೋಧಕ' ಅಳವಡಿಕೆ

Sumana Upadhyaya

ಹುಬ್ಬಳ್ಳಿ: ವಿಶ್ವ ಪಾರಂಪರಿಕ ತಾಣವಾದ ಹಂಪಿ ಕಳೆದ ವರ್ಷದ ಪ್ರವಾಹಕ್ಕೆ ಹಾನಿಗೀಡಾಗಿತ್ತು. ಈ ವರ್ಷ ಕೂಡ ಪ್ರವಾಹ ಉಂಟಾಗಿ ಹಾನಿಯಾಗಬಾರದು ಎಂಬ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆ ಪ್ರವಾಹ ನಿರೋಧಕವನ್ನು ಅಳವಡಿಸುತ್ತಿದೆ.

ಈ ನಿಟ್ಟಿನಲ್ಲಿ ತುಂಗಭದ್ರಾ ನದಿ ತೀರದ ಪಾಂಡುರಂಗ ಮಂಟಪದಲ್ಲಿ ಕೆಲಸ ಆರಂಭವಾಗಿದ್ದು ಬೇರೆ ಸ್ಮಾರಕಗಳಿಗು ಸಹ ಪ್ರವಾಹ ನಿರೋಧಕ ಅಳವಡಿಸುವ ಸಾಧ್ಯತೆಯಿದೆ. ಈ ಯೋಜನೆಯನ್ನು ಪುರಾತತ್ವ ಇಲಾಖೆ ಮತ್ತು ಹಂಪಿ ವಿಶ್ವ ಪಾರಂಪರಿಕ ತಾಣ ನಿರ್ವಹಣಾ ಪ್ರಾಧಿಕಾರ ಜತೆಯಾಗಿ ಕೈಗೆತ್ತಿಕೊಂಡಿದೆ.

ಪ್ರತಿವರ್ಷ ಭಾರೀ ಮಳೆ, ಪ್ರವಾಹ ಉಂಟಾಗಿ ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಬಿಡಲಾಗುತ್ತದೆ. ಇದರಿಂದ ಹಂಪಿಯ ಹಲವು ಸ್ಮಾರಕಗಳು ಮುಳುಗುತ್ತವೆ. ಪಾಂಡುರಂಗ ಮಂಟಪವಂತೂ ಮೊದಲು ನೀರಿನಲ್ಲಿ ಮುಳುಗುತ್ತದೆ. ಹಲವು ವರ್ಷಗಳಿಂದ ಪ್ರವಾಹ ಕಾಣದಿದ್ದ ಕೋದಂಡರಾಮ ದೇವಸ್ಥಾನ ಕಳೆದ ವರ್ಷ ಭಾಗಶಃ ಮುಳುಗಿಹೋಗಿತ್ತು.

ಪ್ರವಾಹಕ್ಕೆ ಹಾನಿಗೀಡಾಗುವುದರಿಂದ ಕಲ್ಲಿನ ಸ್ತಂಭಗಳನ್ನು ಪ್ರವಾಹ ನಿರೋಧಕದಿಂದ ರಕ್ಷಿಸಲಾಗುತ್ತದೆ. ನೀರು ತುಂಬುವುದರಿಂದ ಫಂಗಸ್ ಮತ್ತು ಇತರ ತೇವಾಂಶಗಳು ಕಲ್ಲಿನಲ್ಲಿ ಕೂರುವ ಸಾಧ್ಯತೆ ಹೆಚ್ಚು, ಇದರಿಂದ ಸ್ಮಾರಕಗಳಿಗೆ ಹಾನಿಯಾಗುತ್ತವೆ. ಹೀಗಾಗಿ ಪ್ರವಾಹ ನಿರೋಧಕ ಅಳವಡಿಸುತ್ತಿದ್ದು ಇದಕ್ಕೆ ಎಎಸ್ಐ ಪ್ರಮಾಣಪತ್ರ ನೀಡಿದೆ.

ಪಾಂಡುರಂಗ ಮಂಟಪಕ್ಕೆ ಪ್ರವಾಹ ನಿರೋಧಕ ಅಳವಡಿಸುವ ಕೆಲಸ ಅಂತಿಮ ಹಂತದಲ್ಲಿದೆ. ಬೇರೆ ಸ್ಮಾರಕಗಳಿಗೆ ಸಹ ಈ ವಿಧಾನವನ್ನು ಅಳವಡಿಸಲಾಗುವುದು. ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

SCROLL FOR NEXT