ರಾಜ್ಯ

ನಪಾಸಾದ ವಿದ್ಯಾರ್ಥಿಗಳಿಗೆ ಜೀವನೋಪಾಯದ ಮಾರ್ಗ ಕಂಡುಕೊಳ್ಳಲು ಪ್ರೊ. ಶಂಕರ್ ಬೆಳ್ಳೂರು ಮಾರ್ಗದರ್ಶನ

Srinivas Rao BV

ಮೈಸೂರು: ನಪಾಸಾದ ವಿದ್ಯಾರ್ಥಿಗಳಿಗೆ ಮುಂದಿನ ಜೀವನ ಕಟ್ಟಿಕೊಳ್ಳುವುದಕ್ಕೆ ಮೈಸೂರಿನ ಪ್ರೊಫೆಸರ್ ಶಂಕರ್ ಬೆಳ್ಳೂರು ಮಾರ್ಗದರ್ಶನ ನೀಡುತ್ತಿದ್ದಾರೆ. 

ಶಂಕರ್ ಬೆಳ್ಳೂರು ಈ ರೀತಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೆಲಸವನ್ನು ಕೈಗೆತ್ತಿಕೊಳ್ಳುವುದಕ್ಕೆ ಕಾರಣವಾಗಿದ್ದು ಓರ್ವ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ. ಗ್ರಾಮೀಣ ಭಾಗದ ವಿದ್ಯಾರ್ಥಿಯೊಬ್ಬ ಪಿಯುಸಿಯ ಕಲಾ ವಿಭಾಗದಲ್ಲಿ ನಪಾಸಾಗಿ ಪೋಷಕರಿಂದ ನಿಂದನೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದ. ಈ ಘಟನೆಯೇ ಶಂಕರ್ ಬೆಳ್ಳೂರು ಅವರನ್ನು ನಪಾಸಾದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕೆಲಸ ಕೈಗೆತ್ತಿಕೊಳ್ಳುವುದಕ್ಕೆ ಪ್ರೇರಣೆ ನೀಡಿದ್ದು.

'Career Choice for Students' ಎಂಬ ಶೀರ್ಷಿಕೆಯಡಿ ಯುಟ್ಯೂಬ್ ವಿಡಿಯೋ ಮೂಲಕ ಪರೀಕ್ಷೆಗಳಲ್ಲಿ ನಪಾಸಾದ ಅಥವಾ ನಿರೀಕ್ಷೆಗಿಂತಲೂ ಕಡಿಮೆ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ ಮುಂದಿನ ಜೀವನದ ಬಗ್ಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಶಂಕರ್ ಬೆಳ್ಳೂರು ಅವರ ವಿಡಿಯೋಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ವೃತ್ತಿಪರ ಸಹಾಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಪರ್ಕಿಸುತ್ತಿದ್ದಾರೆ. 

"ಶೈಕ್ಷಣಿಕ ಕೋರ್ಸ್ ಗಳಿಗಿಂತಲೂ ಜೀವನ ದೊಡ್ಡದು, ಜೀವಕ್ಕೆ ಎಲ್ಲಾ ಆಯಾಮಗಳಿಂದಲೂ ತೆರೆದುಕೊಳ್ಳುವುದು ಮುಖ್ಯವಾಗಿದ್ದು, ಆ ವಿದ್ಯಾರ್ಥಿಗಳಿಗೆ ಸೂಕ್ತವಾಗುವಂತಹ ಉದ್ಯೋಗ ಪಡೆದು ಮುಂದೆ ಸಾಗಬೇಕು ಎನ್ನುತ್ತಾರೆ ಪ್ರೊ.ಶಂಕರ್ ಬೆಳ್ಳೂರು

ಈ ಸಂದೇಶದ ಮೂಲಕ ಹಲವಾರು ವಿದ್ಯಾರ್ಥಿಗಳಿಗೆ ಧೈರ್ಯ ಹಾಗೂ ವಿಶ್ವಾಸ ತುಂಬಿರುವ ಪ್ರೊ.ಶಂಕರ್, ವೃತ್ತಿ ಜೀವನಕ್ಕೆ ಆ ವಿದ್ಯಾರ್ಥಿಯ ಕಡಿಕೆ ಅಂಕಗಳು ಪ್ರತಿಕೂಲ ಪರಿಣಾಮ ಬೀರದಂತೆ ಪ್ರಾಯೋಗಿಕ ಕ್ರಮಗಳನ್ನು ಸಲಹೆ ನೀಡುತ್ತಿದ್ದಾರೆ. 

"ಈ ಪ್ರಯತ್ನಕ್ಕೆ ಜನರಿಂದ ಸಿಗುತ್ತಿರುವ ಅಭೂತಪೂರ್ವ ಪ್ರತಿಕ್ರಿಯೆ, ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲಿ ಸವಾಲುಗಳನ್ನು ಎದುರಿಸಲು ಸಿಗುತ್ತಿರುವ ಬೆಂಬಲದ ಕೊರತೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಅರಿಯಲು ಸಾಧ್ಯವಾಯಿತು" ಎಂದು ಅವರು ತಿಳಿಸಿದ್ದಾರೆ. ಶೈಕ್ಷಣಿಕ ವಿಷಯಗಳಿಗೆ ಸಂಬಂಧಪಟ್ಟ ಸವಾಲುಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿಪರ ಜೀವನ ಕಟ್ಟಿಕೊಳ್ಳುವುದಕ್ಕೆ ಸಹಕಾರ ನೀಡಲು ಶಂಕರ್ ಬೆಳ್ಳೂರು ಅವರಿಗೆ ಮುಂದಿನ ದಿನಗಳಲ್ಲಿ career lab ನ್ನು ಪ್ರಾರಂಭಸುವ ಯೋಜನೆ ಇದೆ. 

SCROLL FOR NEXT