ರಾಜ್ಯ

ತುಮಕೂರು: ಕೊರೋನಾ ವಾರಿಯರ್ ಪತ್ನಿಗೆ 'ಕಬಾಲಿ' ಸ್ಟೈಲ್ ನಲ್ಲಿ ಸ್ವಾಗತಿಸಿದ ರಜನಿ ಅಭಿಮಾನಿ

Lingaraj Badiger

ತುಮಕೂರು: ಈವೆಂಟ್ ಮ್ಯಾನೇಜರ್ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್ ಅಭಿಮಾನಿ ರಾಮಚಂದ್ರ ರಾವ್ ಅವರು ಕೊವಿಡ್-19 ನಿಂದ ಚೇತರಿಸಿಕೊಂಡು ಮನೆಗೆ ಮರಳಿದ ತಮ್ಮ ಪತ್ನಿ ಕಲಾವತಿಗೆ ಕಬಾಲಿ ಸ್ಟೈಲ್ ನಲ್ಲಿ ಭರ್ಜರಿ ರೆಡ್ ಕಾರ್ಪೆಟ್ ಸ್ವಾಗತ ನೀಡುವ ಮೂಲಕ ನೆರೆಹೊರೆಯವರಿಗೆ ಅಚ್ಚರಿ ಮೂಡಿಸಿದರು.

ಶ್ರೀರಾಮ ನಗರದ ನಿವಾಸಿ ಕಲಾವತಿ ಅವರು ಕೊವಿಡ್ -19 ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚಿಗೆ ಅವರಿಗೆ ಪಾಸಿಟಿವ್ ದೃಢಪಟ್ಟಿತ್ತು. ಹೀಗಾಗಿ ತಮ್ಮ ಪತಿ ಮತ್ತು ಹತ್ತು ವರ್ಷದ ಮಗಳಿಂದ ದೂರವಾಗಿದ್ದರು. ಈಗ ಕಲಾವತಿ ಅವರು ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದು, ಮನೆಗೆ ಮರಳಿದ ಪತ್ನಿಗೆ ಪತಿ ರಾಮಚಂದ್ರ ಅವರು ಅದ್ಧೂರಿ ಸ್ವಾಗತ ನೀಡಿದ್ದಾರೆ.

ತಮ್ಮ ಪತ್ನಿ ಕೊರೋನಾ ವಾರಿಯರ್ ಆಗಿದ್ದರಿಂದ ನೆರೆಹೊರೆಯವರಿಂದ ಸಾಕಷ್ಟು ಕಿರುಕುಳ ಮತ್ತು ಸಾಮಾಜಿಕ ನಿಷೇಧ ಎದುರಿಸಿದ್ದ ರಾವ್ ಅವರು, ತಮ್ಮ ಪತ್ನಿಗೆ ಅದ್ಧೂರಿ ಸ್ವಾಗತ ನೀಡುವ ನಿರ್ಧಾರ ಮಾಡಿದ್ದರು. ಅದರಂತೆ ಪತ್ನಿ ಡಿಸ್ಚಾರ್ಜ್ ಆಗಿ ಮನೆಗೆ ಬರುವ ದಿನ ಮನೆ ಮುಂದೆ ರೆಡ್ ಕಾರ್ಪೆಟ್ ಹಾಕಿದರು, ಹೂವಿನ ಗೌರವ ಸಲ್ಲಿಸಲು ಮಹಿಳೆಯರ ಗುಂಪನ್ನು ಏರ್ಪಡಿಸಿದರು ಮತ್ತು ಈ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.

ರಾವ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಟಿ ಎ ವೀರಭದ್ರಯ್ಯ ಮತ್ತು ಎಲ್ಲಾ ಸಿಬ್ಬಂದಿಗೆ ಹಣ್ಣು, ಹೂಮಾಲೆ ಮತ್ತು ಹೂಗುಚ್ಚಗಳನ್ನು ನೀಡಿ ಗೌರವಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಹೌದು, ನಾನು ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಮತ್ತು ನನ್ನ ಕುಟುಂಬದವರ ಅಭಿಮಾನಿಯೂ ಹೌದು. ಕಳೆದ 10 ದಿನಗಳಿಂದ ನಮ್ಮ ಮನೆ ಸೀಲ್ ಡೌನ್ ಮಾಡಲಾಗಿತ್ತು. ನನ್ನ ಪತ್ನಿ ಕೊರೋನಾದಿಂದ ಗುಣಮುಖಳಾಗಿ ಮನೆಗೆ ಬರುವುದನ್ನೇ ನಾನು ಕಾಯುತ್ತಿದ್ದೆ ಎಂದು ರಾವ್ ಹೇಳಿದ್ದಾರೆ.

SCROLL FOR NEXT