ರಾಜ್ಯ

ನಿಗದಿಯಂತೆ ನಾಳೆ ಸಿಇಟಿ ಪರೀಕ್ಷೆ ನಡೆಯಲಿದೆ: ಮುಂದೂಡುವಂತೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಜು.30 ಮತ್ತು 31ರಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಮುಂದೂಡಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಮಧ್ಯಂತರ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಇದರಿಂದ ಸಿಇಟಿ ಪರೀಕ್ಷೆಗಳು ನಿಗದಿಯಂತೆ ನಾಳೆ ನಡೆಯಲಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠ, ಕೋವಿಡ್ ಸೋಂಕಿತ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯಲು ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಜೊತಗೆ, ಕಂಟೈನ್‌ಮೆಂಟ್ ವಲಯದ ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷೆಗೆ ತೆರಳಲು ಅವಕಾಶ ಕಲ್ಪಿಸಬೇಕು. ಯಾವೊಬ್ಬ ವಿದ್ಯಾರ್ಥಿಯೂ ಅವಕಾಶವಂಚಿತರಾಗಬಾರದು ಎಂದು ಆದೇಶಿಸಿದೆ.

ರಾಜ್ಯ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಅವರು, ರಾಜ್ಯದಲ್ಲಿ ನಿಗದಿಯಂತೆ ನಾಳೆ ಮತ್ತು ನಾಡಿದ್ದು ಸಿಇಟಿ ಪರೀಕ್ಷೆ ನಡೆಯಲಿದೆ. ಕಂಟೈನ್ಮೆಂಟ್ ಝೋನ್ ನಲ್ಲಿನ ವಿದ್ಯಾರ್ಥಿಗಳಿಗೂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಹೊರ ರಾಜ್ಯದ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಹೊರರಾಜ್ಯದಿಂದ ಬಂದವರಿಗೆ ಕ್ವಾರಂಟೈನ್ ಮಾಡುವುದಿಲ್ಲ. ಸರ್ಕಾರ ನಿಗಧಿಯಿಂತೆ ಜುಲೈ.30, 31ರಂದು ಸಿಇಟಿ ಪರೀಕ್ಷೆ ನಡೆಸಲಿದೆ ಎಂದು ಲಿಖಿತ ರೂಪದಲ್ಲಿ ಹೈಕೋರ್ಟ್ ಗೆ ಮಾಹಿತಿ ನೀಡಿದ್ದಾರೆ.

SCROLL FOR NEXT