ರಾಜ್ಯ

ಬೆಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಕಮಲ್ ಪಂತ್ ನೇಮಕ

Srinivasamurthy VN

ಬೆಂಗಳೂರು: ಬೆಂಗಳೂರು ನಗರ ಪೊಲೀಸ್ ನೂತನ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇಂದು ಭಾಸ್ಕರ್ ರಾವ್ ಸೇರಿದಂತೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ.  ಗುಪ್ತಚರ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾಗಿದ್ದ ಕಮಲ್ ಪಂತ್ ಅವರನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ವರ್ಗಾಯಿಸಲಾಗಿದೆ.

ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರ್ಕಾರ ಇಂದು ವರ್ಗಾಯಿಸಿ ಆದೇಶ ಹೊರಡಿಸಿದೆ. ಬೆಂಗಳೂರು ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ.

ಅದೇ ರೀತಿ ಅಪರಾಧ ತನಿಖಾ ವಿಭಾಗ ಮತ್ತು ಆರ್ಥಿಕ ಅಪರಾಧಗಳ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರನ್ನು ಕಮಲ್ ಪಂತ್‌ ಅವರ ವರ್ಗಾವಣೆಯಿಂದ ತೆರವಾದ ಗುಪ್ತಚರ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಭಾಸ್ಕರ್ ರಾವ್ ಅವರನ್ನು ವರ್ಗಾಯಿಸಲು ಹಲವು ದಿನಗಳಿಂದ ತೆರೆಮರೆಯ ಕಸರತ್ತು ನಡೆದಿತ್ತು. ಲಾಕ್‌ಡೌನ್ ಅವಧಿಯಲ್ಲಿ ಭಾಸ್ಕರ್ ರಾವ್ ಚರ್ಚ್ ಒಂದರ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿಡಿಯೋ ವೈರಲ್ ಆದ ಬಳಿಕ ಅವರ ವರ್ಗಾವಣೆಗೆ ಹೆಚ್ಚಿನ ಒತ್ತಡವಿತ್ತು ಎನ್ನಲಾಗಿದೆ.

SCROLL FOR NEXT