ರಾಜ್ಯ

ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿ ಕೊಲೆ: 15 ವರ್ಷ ಹಿಂದಿನ ಮರ್ಡರ್ ಮಿಸ್ಟ್ರಿ - ಐವರು ಆರೋಪಿಗಳ ಬಂಧನ

Vishwanath S

ಗಂಗಾವತಿ: ಪತಿಯನ್ನು ಸ್ವತಃ ಪತ್ನಿಯೇ ಕೊಲೆ ಮಾಡಿ ಮನೆಯ ಹಿತ್ತಲಲ್ಲಿ ಹೂತ್ತಿಟ್ಟಿದ್ದ ಸುಮಾರು ಒಂದುವರೆ ದಶಕದ ಪ್ರಕರಣವನ್ನು, ಸ್ವತಃ ಕೊಲೆಗಾತಿಯ ಮಗಳು ನೀಡಿದ ದೂರಿನ ಹಿನ್ನೆಲೆ ಬೇಧಿಸಿದ ಪೊಲೀಸರು, ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಗಂಗಾವತಿ‌ನಗರದ ಲಕ್ಷ್ಮಿಸಿಂಗ್ ಪಂಪಾಪತಿ ಅಲಿಯಾಸ್ ಶಂಕರ ಸಿಂಗ್ ವಿರುಪಾಪುರ,ಅಮ್ಜಾದ್ ಅಲಿ ಖಾಸೀಂಸಾಬ ರಾಂಪೂರ ಪೇಟ, ಅಬ್ದುಲ್ ಹಫೀಜ್ ಅಬ್ದುಲ್ ರೆಹೇಮಾನ ಕಿಲ್ಲಾ ಏರಿಯಾ,ಬಾಬಾ ಜಾಕೀರ್ ಭಾಷಾ ಕಾಸೀಂಸಾಬ ಹಾಗೂ ಜಯನಗರದ ಶಿವನಗೌಡ ನಯನಪ್ಪ ಈಳಿಗೆನೂರು ಎಂದು ಗುರುತಿಸಲಾಗಿದೆ.

ಪ್ರಮುಖ ಆರೋಪಿ ಲಕ್ಷ್ಮಿಸಿಂಗ್ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತಿ ಶಂಕರಸಿಂಗ್ ನನ್ನು ಕೊಲೆ ಮಾಡಿ ಮನೆಯ ಹಿತ್ತಲಲ್ಲಿ 2005ರಲ್ಲಿ ಹೂತು ಹಾಕಿದ್ದಾಳೆ. ಇದಕ್ಕೆ ಮೂವರು ಸಹಚರರು ನೆರವು ನೀಡಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದರು. 

ಐದನೇ ಆರೋಪಿ ಶಿವನಗೌಡ ಲಕ್ಷ್ಮಿ ಸಿಂಗ್ ಬಳಿ, 2015ರಲ್ಲಿ ಶವ ಹೂತ್ತಿಟ್ಟಿದ್ದ ಮನೆ ಖರೀದಿಸಿದ್ದಾನೆ. 2017ರಲ್ಲಿ ಮನೆ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯುವ ಸಂದರ್ಭದಲ್ಲಿ ಅಸ್ಥಿಪಂಜರ ಸಿಕ್ಕಿದ್ದು ಇದನ್ನು ಪೊಲೀಸರಿಗೆ ಮಾಹಿತಿ ನೀಡದೇ ಸಾಕ್ಷ್ಯ ನಾಶಪಡಿಸಿದ್ದಾನೆ. ಅಲ್ಲದೇ ಅಸ್ಥಿಪಂಜರವನ್ನು ಹೊಸಪೇಟೆಯ ಹೊರವಲಯದಲ್ಲಿ ಕೊಂಡೊಯ್ದು ಸುಟ್ಟು ಹಾಕಿರುವ ಪ್ರಕರಣವನ್ನು ಕೊಲೆಯ ಆರೋಪಿ ಲಕ್ಷ್ಮಿಸಿಂಗ್ ಪುತ್ರಿ ವಿದ್ಯಾಸಿಂಗ್ ನೀಡಿರುವ ದೂರಿನ ಹಿನ್ನೆಲೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ವರದಿ: ಶ್ರೀನಿವಾಸ ಎಂ.ಜೆ

SCROLL FOR NEXT