ರಾಜ್ಯ

ಮಹಾರಾಷ್ಟ್ರದಿಂದ ಬರುವವರಿಗೆ ಕೊರೋನಾ ಟೆಸ್ಟ್ ಕಡ್ಡಾಯ: ಸುಧಾಕರ್

Shilpa D

ಹಾಸನ: ಮಹಾರಾಷ್ಟ್ರದಿಂದ ವಾಪಾಸಾಗುವವರಿಗೆ ಕೊರೋನಾ ಪರೀಕ್ಷೆ ಮಾಡುವುದು ಹಾಗೂ 14 ದಿನಗಳ ಕ್ವಾರಂಟೈನ್ ಪೂರ್ಣಗೊಳಿಸುವುದು ಕಡ್ಡಾಯ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಚರ್ಚಿಸುವುದಾಗಿ ಸಚಿವ ಸುಧಾಕರ್ ಹೇಳಿದ್ದಾರೆ,

ಹಾಸನದಲ್ಲಿ ಕೋವಿದ್ ಸ್ಥಿತಿಗತಿಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಮಹಾರಾಷ್ಟ್ರದಿಂದ ಬರುವವರನ್ನು ಸದ್ಯ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗುತ್ತಿದೆ, ರಾಜ್ಯದಲ್ಲಿ ಕೊರೋನಾ ಪ್ರಮಾಣ ಕಡಿಮೆಯಿತ್ತು, ಆದರೆ ಮಹಾರಾಷ್ಟ್ರದಿಂದ ವಾಪಸ್ ಬಂದವರಿಂದ ಸೋಂಕಿನ ಪ್ರಮಾಣ ಏರುತ್ತಿದೆ, ಹೀಗಾಗಿ ಅವರನ್ನು 14 ದಿನಗಳ ಕ್ವಾರಂಟೈನ್ ನಂತರ ಮನೆಗೆ ಕಳುಹಿಸುವ ಸಂಬಂಧ ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಅವರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಇದುವರೆಗೆ 3,04,816 ಮಂದಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 3450 ಮಂದಿಗೆ ಮಾತ್ರ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿದೆ. ಅಂದರೆ ಇದರ ಪ್ರಮಾಣ ಶೇಕಡ 1.1ರಷ್ಟಿದ್ದು, ಇದು ದೇಶದಲ್ಲಿಯೇ ಅತ್ಯಂತ ಕಡಿಮೆಯದ್ದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಸೋಂಕು ಕಾಣಿಸಿಕೊಂಡಾಗ ಕೇವಲ 2 ಕೋವಿಡ್ ಪರೀಕ್ಷಾ ಕೇಂದ್ರಗಳಿದ್ದವು, ಈಗ ರಾಜ್ಯದಲ್ಲಿ 64 ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಕೋವಿಡ್ ಶಂಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಮನೆಯಲ್ಲಿ ಕ್ವಾರಂಟೈನ್‌ ನಿಯಮ ಜಾರಿಗೆ ಬರಲಿದೆ. ಇದಕ್ಕಾಗಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುತ್ತಿದೆ. ಇದು ನಗರ, ಪಟ್ಟಣ ಪ್ರದೇಶದಿಂದ ಹಳ್ಳಿವರೆಗೂ ಇರಲಿದೆ ಎಂದರು. ಎಲ್ಲವೂ ಸರಕಾರದ ಕಣ್ಗಾವಲಿನಲ್ಲಿ ನಡೆಯಲಿದೆ. ಆಸ್ಪತ್ರೆಯಿಂದ ಅಥವಾ ವಿವಿಧೆಡೆ ಕ್ವಾರಂಟೈನ್ ನಲ್ಲಿದ್ದವರು ಮನೆಯಲ್ಲೂ ಐಸೋಲೇಶನ್‌ನಲ್ಲಿ ಇರುವುದು ಕಡ್ಡಾಯ ಆಗಲಿದೆ ಎಂದು ಸಚಿವರು ತಿಳಿಸಿದರು.

ರೈಲು ಪ್ರಯಾಣಕ್ಕೆ ಅನುಮತಿ ನೀಡಿರುವ ಕಾರಣ ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ, ಜನತೆ ಆತಂಕ ಪಡಬಾರದು, ಸರ್ಕಾರ ಸದಾ ನಿಮ್ಮೊಂದಿಗಿದ್ದು , ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

SCROLL FOR NEXT