ರಾಜ್ಯ

ಸದ್ಯಕ್ಕೆ ಶಾಲೆ ಆರಂಭವಿಲ್ಲ, ಆತಂಕ ಬೇಡ: ಸಚಿವ ಎಸ್. ಸುರೇಶ್ ಕಮಾರ್

Srinivas Rao BV

ಬೆಂಗಳೂರು: ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ, ಪೋಷಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರ ಮೇ 30 ರಂದು ಶಾಲೆಗಳನ್ನು ಆರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಈ ನಿಟ್ಟಿನಲ್ಲಿ ನಾವು ರಾಜ್ಯದಲ್ಲಿರುವ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ಫೇಸ್‍ಬುಕ್‍ನಲ್ಲಿ ಅವರು ತಿಳಿಸಿದ್ದಾರೆ.

ಇದೇ ಜೂನ್ 10, 11, 12 ರಂದು ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಯಲಿದೆ. ಪೋಷಕರ ಅಭಿಪ್ರಾಯಗಳು ಕ್ರೋಢಿಕರಣವಾಗಿ ಜೂನ್ 15ಕ್ಕೆ ಸರ್ಕಾರವನ್ನು ತಲುಪಬಹುದು. ನಂತರ ಶಾಲೆ ಆರಂಭಿಸಬೇಕೋ? ಬೇಡವೋ ಎಂಬುದನ್ನು ನಿರ್ಧಾರ ಮಾಡಲಾಗುವುದು. ಜುಲೈ 1 ರಿಂದ ಶಾಲೆಯನ್ನು ತೆರೆಯುವುದಿಲ್ಲ. ಅಭಿಪ್ರಾಯ ಸಂಗ್ರಹವಷ್ಟೇ ಎಂದು ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ ಎರಡು ಅಭಿಪ್ರಾಯಗಳು ವ್ಯಕ್ತವಾಗಿದೆ. ಕೊರೊನಾ ದೀರ್ಘ ಕಾಲ ಇದ್ದರೆ ಅಲ್ಲಿಯವರೆಗೆ ಶಾಲೆಯನ್ನು ಮುಂದೂಡಬೇಕೇ ಅಥವಾ ಕೊರೊನಾದ ಜೊತೆಗೆ ನಾವು ಬದುಕಬೇಕೇ ಎಂಬ ಪ್ರಶ್ನೆ ಎದ್ದಿದೆ. ಈಗಾಗಲೇ ಚಿಕನ್ ಗುನ್ಯಾ ರೀತಿಯ ಕಾಯಿಲೆ ಜೊತೆ ಬದುಕುತ್ತಿದ್ದೇವೆ. ಇದೇ ರೀತಿಯಾಗಿ ಕೊರೊನಾ ಜೊತೆ ಬದುಕಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯೂ ಎದ್ದಿದೆ. ಇದರ ಜೊತೆಯಲ್ಲಿ ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವುದು ಹೇಗೆ ಎಂಬ ಬಗ್ಗೆ ನಾವು ಚರ್ಚಿಸಬೇಕಿದೆ ಎಂದು ಅವರು ಹೇಳಿದ್ದಾರೆ.
 

SCROLL FOR NEXT