ರಾಜ್ಯ

ಇಂದಿನಿಂದ ಕೆ.ಎಸ್.ಆರ್.ಟಿ.ಸಿ. ರಾತ್ರಿ ಬಸ್ ಸೇವೆ, ಆಟೋ, ಟ್ಯಾಕ್ಸಿ ಸಂಚಾರ ಆರಂಭ

Nagaraja AB

ಬೆಂಗಳೂರು: ಪ್ರಯಾಣಿಕರ ಒತ್ತಡ ಮತ್ತು ನಷ್ಟ ಸರಿದೂಗಿಸುವ ಉದ್ದೇಶದಿಂದ ಇಂದಿನಿಂದ ಕೆ.ಎಸ್.ಆರ್.ಟಿ.ಸಿಯಿಂದ ರಾತ್ರಿ ಬಸ್ ಸೇವೆ ಆರಂಭಿಸಲಾಗಿದೆ.

ಲಾಕ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಜಾರಿಯಲ್ಲಿರುವ ರಾತ್ರಿವೇಳೆ ಕರ್ಫ್ಯೂ ಸಂದರ್ಭದಲ್ಲಿ ಆಟೋರಿಕ್ಷಾ, ಟ್ಯಾಕ್ಸಿ, ರಾಜ್ಯ ಹಾಗೂ ನಗರ ಸಾರಿಗೆ ಸಂಸ್ಥೆಗಳ ಬಸ್ ಸಂಚಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಅನುಮತಿ ನೀಡಿ, ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಗುರುವಾರ ರಾತ್ರಿ ಆದೇಶ ಹೊರಡಿಸಿ, ರಾತ್ರಿ ೯ ಗಂಟೆಯಿಂದ ಬೆಳಗ್ಗೆ ೫ ಗಂಟೆಯವರೆಗೆ ಈ ಸಾರಿಗೆ ವಾಹನಗಳು ಪ್ರಯಾಣಿಕರನ್ನು ಕರೆದೊಯ್ಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ಮಾಡಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಪ್ರಕಟಣೆ ತಿಳಿಸಿದೆ.

ಕೊವಿಡ್-19 ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೋಂಕು ನಿಯಂತ್ರಣದ ಜತೆಗೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿದೆ. ವ್ಯಕ್ತಿಗತ ಅಂತರ ಕಾಪಾಡಿ, ಸ್ಯಾನಿಟೈಸರ್ ಬಳಸಿ, ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಹೀಗಾಗಿ ಸಾರಿಗೆ ಬಸ್ಸುಗಳಲ್ಲಿನ ಪ್ರಯಾಣ ಸುರಕ್ಷತೆಯಿಂದ ಕೂಡಿದ್ದು, ಸೋಂಕು ನಿಯಂತ್ರಣ ಕ್ರಮಗಳು ಮುಂದುವರೆಯುತ್ತಿವೆ. "ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ" ಎಂದು ಹೇಳಿದೆ.

SCROLL FOR NEXT