ರಾಜ್ಯ

ರೆಸ್ಟೋರೆಂಟ್, ಹೋಟೆಲ್‌ ತೆರೆಯಲು ಮಾರ್ಗಸೂಚಿಗಳ ಪಾಲನೆ ಕಡ್ಡಾಯ: ಸಿಎಂ ಯಡಿಯೂರಪ್ಪ

Lingaraj Badiger

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ರಾಜ್ಯದಲ್ಲಿ ಹೋಟೆಲ್ ಗಳು, ರೆಸ್ಟೋರೆಂಟ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ. ಆದರೆ ನಿಗದಿ ಪಡಿಸಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೋಟೆಲ್ ಗಳ ಸಂಘದ ಪ್ರತಿನಿಧಿಗಳು ಮತ್ತು ಸಾರಿಗೆ ಕಂಪೆನಿಗಳ ಪ್ರತಿನಿಧಿಗಳು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

ಮುಖ್ಯಮಂತ್ರಿಗಳು ಇಂದು ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಹಾಗೂ ಕೆಲವು ತೊಡಕುಗಳ ನಿವಾರಣೆ ಕುರಿತು ಪ್ರವಾಸೋದ್ಯಮ ಹಾಗೂ ಸಾರಿಗೆ ಇಲಾಖೆ ಮತ್ತು ವಿವಿಧ ಭಾಗೀದಾರರ ಜೊತೆಗೆ ಚರ್ಚೆ ನಡೆಸಿದರು.

ಈ ಸಭೆಯಲ್ಲಿ ‌ಭಾಗವಹಿಸಿದ್ದ ಬಸ್ ಮಾಲೀಕರ ಸಂಘ ಹೋಟೆಲ್ ಮಾಲೀಕರ‌ ಸಂಘ ಹಾಗೂ ಟ್ಯಾಕ್ಸಿ ಮಾಲಿಕರ‌ ಸಂಘಗಳ ನಿಯೋಗವು ಸರ್ಕಾರದ ಮುಂದೆ‌ ಕೆಲ ಬೇಡಿಕೆಗಳನ್ನು‌ ಮುಂದಿಟ್ಟರು. ಅವರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಪ್ರವಾಸೋದ್ಯಮ ಇಲಾಖೆಯು, ಹೋಟೆಲ್ ಗಳು, ಆತಿಥ್ಯ ಘಟಕಗಳು ಮತ್ತು ಪ್ರವಾಸಿ ತಾಣಗಳನ್ನು ತೆರೆಯುವ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮಾರ್ಗಸೂಚಿಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರುತಿ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

SCROLL FOR NEXT