ರಾಜ್ಯ

ಉಡುಪಿಯಲ್ಲಿ ಒಂದೇ ದಿನ 204 ಪ್ರಕರಣ ಪತ್ತೆ, ಜೂನ್ 7ರ ಬಳಿಕ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ ಸಾಧ್ಯತೆ

Manjula VN

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಅತೀ ಹೆಚ್ಚು 204 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ರಾಜ್ಯದಲ್ಲಿಯೇ ಅತೀ ಹೆಚ್ಚು 768 ಆಗಿದೆ. ಈ 204 ಸೋಂಕಿತರಲ್ಲಿ ಮುಂಬೈಯಿಂದ ಬಂದವರು 203 ಆಗಿದ್ದರೆ, ಒಬ್ಬರು ಉಡುಪಿ ಜಿಲ್ಲೆಯ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. 

ಜಿಲ್ಲೆಗೆ ಮಹಾರಾಷ್ಟ್ರ ರಾಜ್ಯವೊಂದರಿಂದಲೇ ಸುಮಾರು 8,500ಕ್ಕೂ ಅಧಿಕ ಮಂದಿ ಬಂದಿದ್ದು, ಅವರೆಲ್ಲರ ಕೊರೋನಾ ಪರೀಕ್ಷೆಯ ವರದಿ ಬಂದಿದೆ. ಜಿಲ್ಲೆಯ ಒಟ್ಟು 768 ಸೋಂಕಿತರಲ್ಲಿ ಮುಂಬೈಯಿಂದ ಬಂದ ಸೋಂಕಿತರ ಸಂಖ್ಯೆಯೇ 636 ಆಗಿದೆ. ಉಳಿದಂತೆ 110 ಮಂದಿ ಸೋಂಕಿತರ ಪೊಲೀಸರು ಸ್ಥಳೀಯರಾಗಿದ್ದರೆ, ಉಳಿದವರು ಬೇರೆ ರಾಜ್ಯ-ದೇಶಗಳಿಂದ ಬಂದವರಾಗಿದ್ದಾರೆ. 

ಪ್ರಸ್ತುತ ಜಿಲ್ಲೆಯಲ್ಲಿ ಮುಂಬೈಯಿಂದ ಬರುತ್ತಿರುವವರ ಸಂಖ್ಯೆ ಕಡಿಮೆಯಾಗಿದ್ದು, ಇನ್ನು ಕೆಲವು ದಿನ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಲಿದೆ. ಆದರೆ, ಇನ್ನೂ ಜಿಲ್ಲೆಯ ಸಾವಿರಾರು ಮಂದಿ ಮುಂಬೈಯಿಂದ ಊರಿಗೆ ಬರಲು ಸಿದ್ಧರಾಗಿದ್ದಾರೆ. ಅವರು ಊರಿಗೆ ಬಂದರೆ ಮತ್ತೆ ಜಿಲ್ಲೆಗೆ ಮುಂಬೈ ಸೋಂಕು ತಪ್ಪಿದ್ದಲ್ಲ. 

ಶುಕ್ರವಾರದವರೆಗೂ ಒಟ್ಟಾರೆ 2,000 ಸ್ಯಾಂಪಲ್ಸ್ ಪರೀಕ್ಷೆಗೆ ಬಂದಿದ್ದವು, ಇದರಲ್ಲಿ ಶೇ.10ರಷ್ಟು ಪಾಸಿಟಿವ್ ಪ್ರಕರಣ ಕಂಡು ಬಂದಿತ್ತು. ಶನಿವಾರ ಮತ್ತೊಂದು ಬ್ಯಾಚ್'ನ 1,000 ಸ್ಯಾಂಪಲ್ಸ್ ಗಳು ಬರಲಿವೆ. ಭಾನುವಾರದಿಂದ ಇಷ್ಟೊಂದು ಸಂಖ್ಯೆಯ ಸ್ಯಾಂಪಲ್ಸ್ ಗಳನ್ನು ಪರೀಕ್ಷೆಗೆ ಕಳುಹಿಸುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಹೇಳಿದ್ದಾರೆ. 

SCROLL FOR NEXT