ರಾಜ್ಯ

ಈ ವರ್ಷ ಶಾಲಾ ಪಠ್ಯಪುಸ್ತಕದಲ್ಲಿ ಕೊರೋನಾ ಪಾಠ ಕೂಡ ಇರುತ್ತದೆ: ಸಚಿವ ಸುರೇಶ್ ಕುಮಾರ್

Sumana Upadhyaya

ಕಲಬುರಗಿ:ಕೊರೋನಾ ವೈರಸ್ ಪ್ರಸಕ್ತ ವರ್ಷ ಭೂಮಂಡಲದ ಮೇಲೆ ಮಾಡಿರುವ ಪರಿಣಾಮ ಅಷ್ಟಿಷ್ಟಲ್ಲ. ಅದರ ಬಗ್ಗೆ ಅರಿವು ಮೂಡಿಸಲು ಇದೀಗ ರಾಜ್ಯ ಸರ್ಕಾರ ಕೋವಿಡ್-19 ಬಗ್ಗೆ ಶಾಲಾ ಮಕ್ಕಳಿಗೆ ಒಂದು ಪಾಠವನ್ನೇ ಇಡುತ್ತಿದೆಯಂತೆ.

ಈ ವಿಷಯವನ್ನು ಖುದ್ದು ಶಿಕ್ಷಣ ಸಚಿವ ಸುರೇಶ್ ಕುಮಾರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಆ ಪಾಠದಲ್ಲಿ  ಇಂತಹ ರೋಗಗಳ ಬಗ್ಗೆ ಇತಿಹಾಸ, ಅವುಗಳ ಪರಿಣಾಮ ಸಮಾಜದ ಮೇಲೆ, ಮಾಸ್ಕ್ ಧರಿಸುವ ಅಗತ್ಯ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈ ತೊಳೆಯುವುದು, ಶುಚಿಯಾಗಿರುವುದರ ಬಗ್ಗೆ ವಿವರಣೆಯಿರುತ್ತದೆ.

ಈಗಾಗಲೇ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಪುಸ್ತಕ ಮುದ್ರಣವಾಗಿದೆ, ಹೀಗಾಗಿ ಕೋವಿಡ್-19 ಬಗ್ಗೆ ಪ್ರತ್ಯೇಕ ಕೈಪಿಡಿಯನ್ನು ತಯಾರಿಸುವ ಬಗ್ಗೆ ತಜ್ಞರೊಂದಿಗೆ ಸಮಾಲೋಚಿಸಲಾಗುವುದು. ಈ ವಿಷಯದ ಮೇಲೆ ಮಕ್ಕಳಿಗೆ ಪರೀಕ್ಷೆ ಕೂಡ ಇರುತ್ತದೆ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಇಂದಿನಿಂದ ಪೋಷಕರು, ಶಿಕ್ಷಕರು ಮತ್ತು ಇತರ ಸಂಬಂಧಪಟ್ಟವರ ಜೊತೆ ಸಭೆಗಳು ಆರಂಭವಾಗಲಿದ್ದು ಅದರಲ್ಲಿ ಬಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ಈ ವರ್ಷ ಪಠ್ಯಕ್ರಮ ಮತ್ತು ಶೈಕ್ಷಣಿಕ ಅವಧಿ ಬದಲಾಗುವ ಸಾಧ್ಯತೆಯಿದೆ. ರಜಾದಿನಗಳಲ್ಲಿ ಮತ್ತು ಚಳಿಗಾಲದಲ್ಲಿ ಕೂಡ ತರಗತಿಗಳನ್ನು ನಡೆಸುವ ಬಗ್ಗೆ ಶಿಕ್ಷಕರು ಈಗಾಗಲೇ ಒಪ್ಪಿದ್ದಾರೆ. ಸಿಲೆಬಸ್ ಗಳನ್ನು ಕಡಿತ ಮಾಡಲಾಗುವುದು ಎಂದರು.
ಆನ್ ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುವುದು. ಎಲ್ ಕೆ ಜಿ,ಯುಕೆಜಿ ಮತ್ತು ಪ್ರಾಥಮಿಕ ತರಗತಿಗಳಿಗೆ ಆನ್ ಲೈನ್ ತರಗತಿ ಮಾಡುವ ಬಗ್ಗೆ ಸರ್ಕಾರ ಕೂಡ ಆಸಕ್ತಿ ಹೊಂದಿಲ್ಲ. ಮಹಾರಾಷ್ಟ್ರದಿಂದ ವಾಪಸಾದ ವಲಸೆ ಕಾರ್ಮಿಕರ ಮಕ್ಕಳಿಗೆ ಸಹ ಶಾಲೆಗಳಲ್ಲಿ ಪ್ರವೇಶಾತಿ ನೀಡಲಾಗುವುದು ಎಂದು ತಿಳಿಸಿದರು.

SCROLL FOR NEXT