ರಾಜ್ಯ

ರಾಜ್ಯದಲ್ಲಿ ಕೊರೋನಾಗೆ ಇಂದು ಮೂವರು ಬಲಿ, ಬೆಂಗಳೂರಿನಲ್ಲಿ 42 ಸೇರಿ 120 ಮಂದಿಗೆ ಪಾಸಿಟಿವ್

Lingaraj Badiger

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಬುಧವಾರ ಮಹಾಮಾರಿಗೆ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 69ಕ್ಕೇರಿಕೆಯಾಗಿದೆ.

ಇಂದು ಮತ್ತೆ 120 ಮಂದಿಗೆ ಕೊವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 6041ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಂದು 257 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 3108 ಸಕ್ರಿಯ ಪ್ರಕರಣಗಳಿದ್ದು, 14 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

120 ಸೋಂಕಿತರ ಪೈಕಿ 68 ಮಂದಿ ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮೂವರು ಅಂತಾರಾಷ್ಟ್ರೀಯ ಪ್ರಯಾಣದಿಂದ ಮರಳಿದ್ದಾರೆ.

ಧಾರವಾಡದ 58 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದರು. ಇವರು ಮಹಾರಾಷ್ಟ್ರದಿಂದ ಆಗಮಿಸಿ ಮೇ23ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರು ನಗರದ 32 ವರ್ಷದ ವ್ಯಕ್ತಿಯನ್ನು ಬುಧವಾರ ಆಸ್ಪತ್ರೆಗೆ ಕರೆತರುವಾಗಲೇ ಮೃತಪಟ್ಟಿದ್ದರು. ನಗರದಲ್ಲಿ ಇನ್ನೋರ್ವ 57 ವರ್ಷದ ವ್ಯಕ್ತಿ ಜ್ವರ, ಕೆಮ್ಮಿನ ಹಿನ್ನೆಲೆಯೊಂದಿಗೆ ಜೂ.8ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಇವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ನಗರದಲ್ಲಿ 42, ಯಾದಗಿರಿಯಲ್ಲಿ 27, ವಿಜಯಪುರದಲ್ಲಿ 13, ಕಲಬುರಗಿಯಲ್ಲಿ 11, ಬೀದರ್ ನಲ್ಲಿ 5, ದಕ್ಷಿಣ ಕನ್ನಡ, ದಾರವಾಡದಲ್ಲಿ ತಲಾ 4, ದಾವಣಗೆರೆ, ಹಾಸನ, ಬಳ್ಳಾರಿಯಲ್ಲಿ ತಲಾ 3, ಬಾಗಲಕೋಟೆ, ರಾಮನಗರದಲ್ಲಿ ತಲಾ 2, ಬೆಳಗಾವಿಯಲ್ಲಿ 1 ಪ್ರಕರಣಗಳು ವರದಿಯಾಗಿವೆ.

SCROLL FOR NEXT