ರಾಜ್ಯ

ಗುತ್ತಿಗೆ ಅವಧಿ ಮುಗಿದಿರುವ ಎಲ್ಲಾ ಆಸ್ತಿ ವಶಕ್ಕೆ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧಾರ

Shilpa D

ಬೆಂಗಳೂರು: ಭೋಗ್ಯಕ್ಕೆ (ಲೀಸ್) ನೀಡಿರುವ ಪಾಲಿಕೆಯ ಎಲ್ಲಾ ಕಟ್ಟಡಗಳ ದಾಖಲಾತಿಗಳನ್ನು ಪುನರ್ ಪರಿಶೀಲಿಸಲು ಬಿಬಿಎಂಪಿ ನಿರ್ಧರಿಸಿದೆ.ನಗರದಲ್ಲಿ ಗುತ್ತಿಗೆ ಅವಧಿ ಮುಗಿದಿರುವ ಹಾಗೂ ಇನ್ನೂ ಚಾಲ್ತಿಯಲ್ಲಿರುವ ಒಟ್ಟು 324 ಆಸ್ತಿಗಳಿಗೆ ಸದ್ಯದ ಮಾರುಕಟ್ಟೆ ದರ ನಿಗದಿ ಮಾಡಲು ನಿರ್ಧರಿಸಲಾಗಿದೆ ಎಂದು ಮೇಯರ್‌ ಎಂ.ಗೌತಮ್‌ಕುಮಾರ್‌ ತಿಳಿಸಿದ್ದಾರೆ

ಪಾಲಿಕೆಯ ಆಸ್ತಿ ಸಂರಕ್ಷಣೆ, ತೆರಿಗೆ ಸಂಗ್ರಹ ಹಾಗೂ ಗುತ್ತಿಗೆ ದರ ನಿಗದಿ ಮಾಡುವ ಸಂಬಂಧ ಬುಧವಾರ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಮೇಯರ್‌ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಬಿಎಂಪಿಯಿಂದ ವಿವಿಧ ಸಂಘ-ಸಂಸ್ಥೆಗಳು  ಹಾಗೂ ಸೇವಾ ಸಂಸ್ಥೆಗಳಿಗೆ ಕಡಿಮೆ ದರಕ್ಕೆ ಗುತ್ತಿಗೆ ನೀಡಲಾಗಿದೆ.

ಈ ರೀತಿ ಒಟ್ಟು 324 ವಿವಿಧ ಸಂಘ ಸಂಸ್ಥೆಗಳು ಹಾಗೂ ಸಮಾಜ ಸೇವಾ ಸಂಸ್ಥೆಗಳಿಗೆ ಗುತ್ತಿಗೆ ನೀಡಲಾಗಿದೆ. ಇವುಗಳಲ್ಲಿ 159  ಆಸ್ತಿಗಳ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, 165 ಆಸ್ತಿಗಳ ಗುತ್ತಿಗೆ ಅವಧಿ ಇನ್ನೂ ಬಾಕಿ ಇದೆ. ಎಲ್ಲವನ್ನೂ ಸದ್ಯದ ಮಾರುಕಟ್ಟೆ ದರಕ್ಕೆ ನಿಗದಿ ಮಾಡಲುತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಆಸ್ತಿಗಳ ವಿಭಾಗಕ್ಕೆ  ವಿಶೇಷ ತಂಡ: ಪಾಲಿಕೆಯ ಆಸ್ತಿ ಸಂರಕ್ಷಿಸುವ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲು ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದ ಮೇಯರ್‌, ತಹಶೀಲ್ದಾರ್‌ಗಳು, ಸಹಾಯಕ ಕಂದಾಯ ಅಧಿಕಾರಿಗಳು, ಎಂಜಿನಿಯರ್‌ ಗಳು ಹಾಗೂ ಸರ್ವೇಯರ್‌ಗಳ ವಿಶೇಷ ತಂಡ ರಚಿಸಿ ಆಸ್ತಿಗಳ ವಿಭಾಗ ಬಲಪಡಿಸಲು ಸೂಚಿಸಲಾಗಿದೆ.

ಪಾಲಿಕೆ ಒಡೆತನದ ಆಸ್ತಿಗಳನ್ನು ನಿಗದಿತ ಸಮಯದಲ್ಲಿ ಹಿಂಪಡೆಯಲು ಕ್ರಮವಹಿಸಬೇಕು. ಭೋಗ್ಯದ ಅವಧಿ ಮುಗಿದ ಕಟ್ಟಡಗಳಿದ್ದರೆ ಇಂದಿನ ಮಾರುಕಟ್ಟೆ ದರದ ಪ್ರಕಾರ ಶುಲ್ಕ ನಿಗದಿಪಡಿಸಿ, ಗುತ್ತಿಗೆಯನ್ನು ನವೀಕರಿಸಬಹುದು’ ಹೇಳಿದರು. ಸರ್ಕಾರದಿಂದ ಹಸ್ತಾಂತರವಾದ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಪಾಲಿಕೆಗೆ ಹಸ್ತಾಂತರಿಸಿರುವ ಬಡಾವಣೆಗಳಲ್ಲಿರುವ ಆಸ್ತಿಗಳ ಪ್ರತ್ಯೇಕ ಪಟ್ಟಿ ತಯಾರಿಸಬೇಕು. ಇಂತಹ ಬಹಳಷ್ಟು ಆಸ್ತಿಗಳಿಗೆ ಗುರುತು ಸಂಖ್ಯೆ (ಪಿಐಡಿ) ನೀಡಿಲ್ಲ. ಆದಷ್ಟು ಬೇಗ ಪಿಐಡಿ ನೀಡಿ ಅವುಗಳ ರಕ್ಷಣೆಗೆ ಕ್ರಮಕೈಗೊಳ್ಳುವಂತೆ ಮೇಯರ್‌ ತಿಳಿಸಿದರು.

SCROLL FOR NEXT